ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಮಾತುಕತೆ ನಡೆಸಿದ್ದಾರೆ.
ಈ ಸಂಬಂಧ ಪ್ರಧಾನಿ ಕಾರ್ಯಾಲಯ ಮಾಹಿತಿ ಹಂಚಿಕೊಂಡಿದೆ.
ಬಳಿಕ ಈ ಕುರಿತು ಸಿಎಂ ರೇಖಾ ಗುಪ್ತಾ ಮಾಹಿತಿ ನೀಡಿದ್ದು, ಶಿಷ್ಟಾಚಾರದಂತೆ ಪ್ರಧಾನಿಮಂತ್ರಿಯವರ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವುದಾಗಿ ತಿಳಿಸಿದ್ದಾರೆ.
'ನಿಮ್ಮ ಮಾರ್ಗದರ್ಶನ ಹಾಗೂ ನಾಯಕತ್ವದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವು ಸಾರ್ವಜನಿಕ ಕಲ್ಯಾಣ ಮತ್ತು ಉತ್ತಮ ಆಡಳಿತವನ್ನು ನೀಡುವ ಮೂಲಕ ಜನರ ಕನಸುಗಳನ್ನು ಈಡೇರಿಸಲು ಹಾಗೂ ಅಭಿವೃದ್ಧಿ ಹೊಂದಿದ ದೆಹಲಿಯನ್ನಾಗಿ ಪರಿವರ್ತಿಸಲು ಬದ್ಧರಾಗಿದ್ದೇವೆ' ಎಂದು ಅವರು ತಿಳಿಸಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ನಡೆದ ಚುನಾವಣೆಯಲ್ಲಿ 48 ಕ್ಷೇತ್ರಗಳನ್ನು ಗೆದ್ದು ಬಿಜೆಪಿ 26 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಎಎಪಿ 22 ಸ್ಥಾನಗಳಲ್ಲಿ ಗೆದ್ದಿದ್ದರೆ ಕಾಂಗ್ರೆಸ್ ಸತತ ಮೂರನೇ ಸಲವೂ ಖಾತೆ ತೆರೆಯುವಲ್ಲಿ ವಿಫಲವಾಗಿತ್ತು.
ರೇಖಾ ಗುಪ್ತಾ ಅವರು ದೆಹಲಿಯ ಒಂಬತ್ತನೇ ಮುಖ್ಯಮಂತ್ರಿಯಾಗಿದ್ದಾರೆ. ಹಾಗೆಯೇ ದೆಹಲಿ ಸಿಎಂ ಆದ ನಾಲ್ಕನೇ ಮಹಿಳೆಯಾಗಿದ್ದಾರೆ.