ನವದೆಹಲಿ: ಹಲಾಲ್ ಪ್ರಮಾಣಪತ್ರ ನೀಡುವ ಏಜೆನ್ಸಿಗಳು ಪ್ರಮಾಣಪತ್ರ ನೀಡುವ ಪ್ರಕ್ರಿಯೆಯ ಮೂಲಕ 'ಕೆಲವು ಲಕ್ಷ ಕೋಟಿಗಳಷ್ಟು' ಸಂಪಾದಿಸಿವೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನೀಡಿರುವ ಹೇಳಿಕೆಗೆ ಜಮಾತ್ ಉಲೇಮಾ-ಎ-ಹಿಂದ್ ಹಲಾಲ್ ಟ್ರಸ್ಟ್ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪ ದಾಖಲಿಸಿದೆ.
ಜನವರಿ 20ರಂದು ನಡೆದ ವಿಚಾರಣೆಯೊಂದರ ಸಂದರ್ಭದಲ್ಲಿ ಮೆಹ್ತಾ ಈ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಸಂಪೂರ್ಣವಾಗಿ ತಪ್ಪು ಎಂದು ಟ್ರಸ್ಟ್ ಹೇಳಿದೆ. ಹಲಾಲ್ ಪ್ರಮಾಣಪತ್ರ ಇರುವ ಉತ್ಪನ್ನಗಳನ್ನು ನಿಷೇಧಿಸಿ ಉತ್ತರ ಪ್ರದೇಶ ಸರ್ಕಾರ ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಟ್ರಸ್ಟ್ ಕೂಡ ಕೋರ್ಟ್ ಮೆಟ್ಟಿಲೇರಿದೆ.
ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠದ ಎದುರು ಮೆಹ್ತಾ ಅವರು, 'ಬಳಕೆಯಾಗುವ ಸಿಮೆಂಟ್ ಕೂಡ ಹಲಾಲ್ ಪ್ರಮಾಣಪತ್ರದ್ದಾಗಿದೆ, ಕಬ್ಬಿಣದ ಸಲಾಕೆಗಳು ಕೂಡ ಹಲಾಲ್ ಪ್ರಮಾಣಪತ್ರ ಹೊಂದಿದವು' ಎಂದು ಹೇಳಿದ್ದರು.
ಹಲಾಲ್ ಪ್ರಮಾಣಪತ್ರ ನೀಡುವ ಏಜೆನ್ಸಿಗಳು ಹಣ ಪಡೆದುಕೊಳ್ಳುತ್ತಿವೆ, ಈ ಪ್ರಕ್ರಿಯೆಯಲ್ಲಿ ಸಂಗ್ರಹ ಆಗುವ ಒಟ್ಟು ಮೊತ್ತವು ಕೆಲವು ಲಕ್ಷ ಕೋಟಿಗಳಷ್ಟು ಆಗಬಹುದು ಎಂದು ಅವರು ಹೇಳಿದ್ದರು. ಕೆಲವರಿಗೆ ಹಲಾಲ್ ಪ್ರಮಾಣಪತ್ರ ಇರುವ ಉತ್ಪನ್ನಗಳು ಬೇಕು ಎಂಬ ಕಾರಣಕ್ಕೆ ಅದರಲ್ಲಿ ನಂಬಿಕೆ ಇಲ್ಲದವರು ಉತ್ಪನ್ನಕ್ಕೆ ಹೆಚ್ಚಿನ ಮೊತ್ತ ಏಕೆ ನೀಡಬೇಕು ಎಂದು ಮೆಹ್ತಾ ಪ್ರಶ್ನಿಸಿದ್ದರು.