ನವದೆಹಲಿ: ಮದ್ರಾಸ್ ಮತ್ತು ತೆಲಂಗಾಣ ಹೈಕೋರ್ಟ್‌ಗಳ ಐವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಖಾಯಂ ನ್ಯಾಯಮೂರ್ತಿಗಳಾಗಿ ನೇಮಕ ಮಾಡಬೇಕೆಂಬ ಶಿಫಾರಸ್ಸನ್ನು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಅಂಗೀಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಕೊಲಿಜಿಯಂ ಬುಧವಾರ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದೆ.
ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ವೆಂಕಟಾಚಾರಿ ಲಕ್ಷ್ಮೀನಾರಾಯಣನ್ ಮತ್ತು ನ್ಯಾಯಮೂರ್ತಿ ಪೆರಿಯಸಾಮಿ ವಡಮಲೈ ಅವರನ್ನು ಖಾಯಂ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವ ಕುರಿತಂತೆ ಮಾಡಲಾಗಿದ್ದ ಶಿಫಾರಸ್ಸನ್ನು 2025ರ ಫೆಬ್ರುವರಿ 5ರಂದು ನಡೆದ ಸಭೆಯಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಸಭೆ ಒಪ್ಪಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ತೆಲಂಗಾಣ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಗಳಾಗಿ ಹೆಚ್ಚುವರಿ ನ್ಯಾಯಮೂರ್ತಿಗಳಾದ ಲಕ್ಷ್ಮೀ ನಾರಾಯಣ ಅಲಿಶೆಟ್ಟಿ, ನ್ಯಾಯಮೂರ್ತಿ ಅನಿಲ್ ಕುಮಾರ್ ಜುಕಂಟಿ ಮತ್ತು ನ್ಯಾಯಮೂರ್ತಿ ಸುಜನಾ ಕಲಾಸಿಕಂ ಅವರನ್ನು ನೇಮಿಸುವ ಪ್ರಸ್ತಾವನೆಯನ್ನು ಕೊಲಿಜಿಯಂ ಅನುಮೋದಿಸಿದೆ ಎಂದು ಮತ್ತೊಂದು ಹೇಳಿಕೆ ತಿಳಿಸಿದೆ.