ಢಾಕಾ: ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ (ಬಿಎನ್‌ಪಿ) ನಾಯಕರೊಬ್ಬರನ್ನು ಅವರ ಪತ್ನಿಯ ಎದುರೇ ವಿರೋಧಿಗಳು ಥಳಿಸಿ ಕೊಂದಿರುವ ಘಟನೆ ಢಾಕಾದಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎನ್‌ಪಿಯ ಕುಲ್ಲಾ ಘಟಕದ ಮಾಜಿ ಉಪಾಧ್ಯಕ್ಷ ಮೊಹಮ್ಮದ್ ಬಾಬುಲ್ ಮಿಯಾ ಅವರು ತಮ್ಮ ಪತ್ನಿ ಯಾಸ್ಮಿನ್ ಬೇಗಂ ಅವರೊಂದಿಗೆ ಧಾಮ್ರೈ ಉಪಜಿಲ್ಲೆಯ ಅಕ್ಷಿರ್‌ನಗರ್ ಹೌಸಿಂಗ್ ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದರು.
ಈ ವೇಳೆ ಸ್ಥಳಕ್ಕೆ ಬಂದ ಗುಂಪೊಂದು ಮಿಯಾ ಅವರನ್ನು ಹೊಡೆದು ಹತ್ಯೆ ಮಾಡಿದೆ.
'ಗ್ರಾಮಸ್ಥರು ಹಾಗೂ ಅಕ್ಷಿರ್‌ನಗರ್ ಹೌಸಿಂಗ್ ಎಂಬ ರಿಯಲ್ ಎಸ್ಟೇಟ್ ಸಂಸ್ಥೆ ನಡುವೆ ವ್ಯಾಜ್ಯವಿತ್ತು. ಬಾಬುಲ್ ಈ ಜಗಳದಲ್ಲಿ ಭಾಗಿಯಾಗಿರಲಿಲ್ಲ. ಆದರೂ ಸ್ಥಳೀಯ ಪುಂಡರು ಅವರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದರು' ಎಂದು ಬಾಬುಲ್ ಪತ್ನಿ ತಿಳಿಸಿದ್ದಾರೆ.
'ಪೈಪ್‌ಗಳು ಹಾಗೂ ದೊಣ್ಣೆಗಳಿಂದ ಬಾಬುಲ್ ಅವರಿಗೆ ಹೊಡೆದರು. ಎರಡೂ ಕಣ್ಣುಗಳನ್ನು ಕಿತ್ತು ಹಾಕಿದರು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲೂ ಬಿಡಲಿಲ್ಲ. ಬಾಬುಲ್ ಪ್ರಜ್ಞಾಹೀನರಾದ ಬಳಿಕವೇ ಸ್ಥಳದಿಂದ ಪರಾರಿಯಾದರು' ಎಂದರು.
ಘಟನೆ ಕುರಿತು ಧಾಮ್ರೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.