ಇಂಫಾಲ: ಮಣಿಪುರದಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ಆರು ಮಂದಿಯನ್ನು ಬಂಧಿಸಲಾಗಿದೆ. ಸುಲಿಗೆ ಆರೋಪದಡಿ ತೊಡಗಿದ್ದ ಮತ್ತಿಬ್ಬರನ್ನು ಪೂರ್ವ ಇಂಫಾಲದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ನಿಷೇಧಿತ ಸಂಘಟನೆ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ ಆರು ಮಂದಿ ಸದಸ್ಯರನ್ನು ಪಶ್ಚಿಮ ಇಂಫಾಲ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತರಿಂದ ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪೂರ್ವ ಇಂಫಾಲದ ಕೆಲವು ಪ್ರದೇಶಗಳಲ್ಲಿ ಸುಲಿಗೆಯಲ್ಲಿ ಭಾಗಿಯಾಗಿದ್ದ ಆರೋಪದಡಿ ಮತ್ತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಒಪ್ಪಿಸುವಂತೆ ಜನರಲ್ಲಿ ಮನವಿ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ.
ಟೆಂಗ್‌ನ್‌ಪಾಲ್ ಜಿಲ್ಲೆಯ ಮೊರೆಹ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾವೋಜಾಂಗ್ ಗ್ರಾಮದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ, 22 ಕೆಜಿ ತೂಕದ ಎರಡು ಸುಧಾರಿತ ಸ್ಫೋಟಕಗಳು, 7 ಕೆ.ಜಿ ಐಇಡಿ ಸೇರಿದಂತೆ ವಿವಿಧ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಬ್ ನಿಷ್ಕ್ರಿಯ ತಂಡ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದು, ಐಇಡಿ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.