ನವದೆಹಲಿ: ಜಮೀನು ಮಾಲೀಕನಿಗೆ ತನ್ನ ಜಮೀನು ಅನಿರ್ದಿಷ್ಟ ಅವಧಿಗೆ ಬಳಕೆಗೆ ಸಿಗದಂತೆ ಮಾಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಈಚೆಗೆ ಹೇಳಿದೆ.
ಬಾಂಬೆ ಹೈಕೋರ್ಟ್ ನೀಡಿದ ಆದೇಶವೊಂದನ್ನು ರದ್ದುಪಡಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್.ಮಹಾದೇವನ್ ಅವರು ಇರುವ ವಿಭಾಗೀಯ ಪೀಠವು ಈ ಮಾತು ಹೇಳಿದೆ.
'ಜಮೀನು ಮಾಲೀಕನಿಗೆ ಅದನ್ನು ಬಳಸಲು ಅನಿರ್ದಿಷ್ಟಾವಧಿಗೆ ಸಾಧ್ಯವಾಗದಂತೆ ಮಾಡಬಾರದು. ಜಮೀನನ್ನು ನಿರ್ದಿಷ್ಟ ಬಗೆಯಲ್ಲಿ ಬಳಸಬಾರದು ಎಂಬ ನಿರ್ಬಂಧವನ್ನು ಹೇರಿದ ನಂತರದಲ್ಲಿ, ಆ ನಿರ್ಬಂಧವು ಅನಿರ್ದಿಷ್ಟ ಅವಧಿಗೆ ಮುಂದುವರಿಯಬಾರದು' ಎಂದು ಪೀಠವು ಹೇಳಿದೆ.
ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನಾ ಕಾಯ್ದೆ - 1966ನ್ನು ಉಲ್ಲೇಖಿಸಿದ ಪೀಠವು, ಅಭಿವೃದ್ಧಿ ಯೋಜನೆಯಲ್ಲಿ ಜಾಗವೊಂದನ್ನು 33 ವರ್ಷಗಳವರೆಗೆ ಮೀಸಲಾಗಿ ಇರಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದೆ.