ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರತಿನಿಧಿಗಳು ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನೇತೃತ್ವದ ಕೇಂದ್ರ ತಂಡದ ನಡುವೆ ಶುಕ್ರವಾರ ಸೌಹಾರ್ದ ಸಭೆ ನಡೆದಿದ್ದು, ಮುಂದಿನ ಸುತ್ತಿನ ಮಾತುಕತೆಯನ್ನು ಇದೇ 22ಕ್ಕೆ ನಿಗದಿಪಡಿಸಲಾಗಿದೆ.
ರೈತರ ಒಂದು ವರ್ಷದ ಪ್ರತಿಭಟನೆಯ ನಂತರ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ 28 ಸದಸ್ಯರ ನಿಯೋಗದೊಂದಿಗೆ ಕೇಂದ್ರ ತಂಡವು ಎರಡೂವರೆ ಗಂಟೆಗಳ ಕಾಲ ಸಭೆ ನಡೆಸಿತು. ಪಂಜಾಬ್ ರಾಜ್ಯ ಸರ್ಕಾರದ ಕೃಷಿ ಸಚಿವ ಗುರ್ಮೀತ್ ಸಿಂಗ್ ಖುದ್ದಿಯಾನ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಲಾಲ್ ಚಂದ್ ಕತರುಚಕ್ ಹಾಗೂ ರಾಜ್ಯ ಸರ್ಕಾರದ ಇತರ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶಂಭು ಮತ್ತು ಖಾನೌರಿಯಲ್ಲಿ ಕಳೆದ ಒಂದು ವರ್ಷದಿಂದ ರೈತರ ಪ್ರತಿಭಟನೆ ನಡೆಯುತ್ತಿದೆ.
ಇಲ್ಲಿನ ಮಹಾತ್ಮಾ ಗಾಂಧಿ ರಾಜ್ಯ ಸಾರ್ವಜನಿಕ ಆಡಳಿತ ಸಂಸ್ಥೆಯಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸೌಹಾರ್ದ ವಾತಾವರಣದಲ್ಲಿ ಮಾತುಕತೆ ನಡೆಯಿತು. ಮತ್ತೊಂದು ಸುತ್ತಿನ ಮಾತುಕತೆಯನ್ನು ಇದೇ 22ರಂದು ನಡೆಸಲಾಗುವುದು. ಮುಂದಿನ ಸಭೆಯಲ್ಲಿ ಕೇಂದ್ರ ತಂಡದ ನೇತೃತ್ವವನ್ನು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವ ವಹಿಸಲಿದ್ದಾರೆ. ಆ ದಿನದ ಮಾತುಕತೆಯಲ್ಲಿ ತಾನೂ ಭಾಗವಹಿಸುವೆ ಎಂದು ತಿಳಿಸಿದರು.
ರೈತರ ಕಲ್ಯಾಣಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಕ್ರಮಗಳ ವಿವರಗಳನ್ನು ಸಭೆಯಲ್ಲಿ ರೈತ ನಾಯಕರ ಜತೆ ಹಂಚಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ಮುಖಂಡ ಜಗಜಿತ್ ಸಿಂಗ್ ಡಲ್ಲೆವಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ಸಭೆ ಸಕಾರಾತ್ಮಕ ವಾತಾವರಣದಲ್ಲಿ ನಡೆದಿದೆ. ಮುಂದಿನ ವಾರ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ ಎಂದು ತಿಳಿಸಿದರು.
ಜಗಜಿತ್ ಸಿಂಗ್ ಡಲ್ಲೆವಾಲ್ ಅವರನ್ನು ಖಾನೌರಿ ಪ್ರತಿಭಟನಾ ಸ್ಥಳದಿಂದ ಸಭೆಯ ಸ್ಥಳಕ್ಕೆ ಆಂಬುಲೆನ್ಸ್‌ನಲ್ಲಿ ಕರೆತರಲಾಯಿತು. ಡಲ್ಲೆವಾಲ್ ಅವರು ಚಂಡೀಗಢ ತಲುಪಲು ನಾಲ್ಕು ಗಂಟೆ ಬೇಕಾಯಿತು ಎಂದು ರೈತ ಮುಖಂಡ ಕಾಕಾ ಸಿಂಗ್ ಕೊಟ್ರಾ ಹೇಳಿದ್ದಾರೆ.