ಮನಿಲಾ: ವಿವಾದಿತ ದಕ್ಷಿಣ ಚೀನಾ ಪ್ರದೇಶದಲ್ಲಿರುವ ದ್ವೀಪ ಸ್ಕಾರ್‌ಬೊರೊ ಶೋಲ್ ಮೇಲೆ ಅಮೆರಿಕ ಮತ್ತು ಫಿಲಿಪ್ಪೀನ್ಸ್ ದೇಶಗಳು ಮಂಗಳವಾರ ಯುದ್ಧ ನೌಕೆಗಳ ಜಂಟಿ ತಾಲೀಮು ನಡೆಸಿದವು ಎಂದು ಫಿಲಿಪ್ಪೀನ್ಸ್ ಅಧಿಕಾರಿಗಳು ತಿಳಿಸಿದರು.
ಕಳೆದ ವರ್ಷ ಈ ಪ್ರದೇಶಕ್ಕೆ ಪ್ರವೇಶಿಸಿದ್ದ ಫಿಲಿಪ್ಪೀನ್ಸ್ ಯುದ್ಧವಿಮಾನಗಳನ್ನು ಚೀನಾದ ಯುದ್ಧ ವಿಮಾನಗಳು ಹಿಮ್ಮೆಟ್ಟಿಸಿದ್ದವು.
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಉಭಯ ದೇಶಗಳು ಜಂಟಿ ಸಮರಾಭ್ಯಾಸ ನಡೆಸಿದವು.
ಅಮೆರಿಕ ವಾಯುಪಡೆಯ ಎರಡು ಬಿ-1 ಬಾಂಬರ್ ಯುದ್ಧ ವಿಮಾನಗಳು ಮತ್ತು ಫಿಲಿಪ್ಪೀನ್ಸ್ ವಾಯುಪಡೆಯ ಮೂರು ಎಫ್‌ಎ-50 ಯುದ್ಧ ವಿಮಾನಗಳು ತಾಲೀಮು ನಡೆಸಿದವು. ಶತ್ರು ದೇಶಗಳ ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಬಗ್ಗೆ ಸಹ ತರಬೇತಿ ನಡೆಸಲಾಯಿತು ಎಂದು ಫಿಲಿಪ್ಪೀನ್ಸ್ ವಾಯುಪಡೆಯ ವಕ್ತಾರ ಮರಿಯಾ ಕಾನ್ಸುಲೊ ಕ್ಯಾಸ್ಟಿಲೊ ತಿಳಿಸಿದರು.
ಜಂಟಿ ಸಮರಾಭ್ಯಾಸಕ್ಕೆ ಚೀನಾ ಪಡೆಗಳಿಂದ ಸವಾಲುಗಳು ಎದುರಾಯಿತೇ ಎಂಬ ಬಗ್ಗೆ ತಕ್ಷಣಕ್ಕೆ ಮಾಹಿತಿ ದೊರೆತಿಲ್ಲ.