ನವದೆಹಲಿ: ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಬಿಡುಗಡೆ ಮಾಡಿರುವ ಪರಿಹಾರ ಪ್ಯಾಕೇಜ್ ಅನ್ನು ಅನುದಾನವಾಗಿ ಪರಿವರ್ತಿಸುವಂತೆ ಒತ್ತಾಯಿಸಿ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚೂರಲ್‌ಮಲ ಮತ್ತು ಮುಂಡಕ್ಕೈ ಪ್ರದೇಶದಲ್ಲಿ ಕಳೆದ ವರ್ಷ ಜುಲೈನಲ್ಲಿ ಸಂಭವಿಸಿದ್ದ ಭೂಕುಸಿತದ ಸಂತ್ರಸ್ತರು ಎದುರಿಸುತ್ತಿರುವ ಸಂಕಷ್ಟಗಳನ್ನು ಅವರು ಪತ್ರದಲ್ಲಿ ವಿವರಿಸಿ, ಕೇಂದ್ರ ಸರ್ಕಾರ ನೆರವಿನ ಹಸ್ತ ಚಾಚಬೇಕೆಂದು ಕೋರಿದ್ದಾರೆ.
ಕೇರಳದ ಸಂಸದರ ಮನವಿಯಂತೆ ಕೇಂದ್ರ ಸರ್ಕಾರವು ಸಂತ್ರಸ್ತರಿಗೆ ₹529.50 ಕೋಟಿ ಮೊತ್ತದ ಪರಿಹಾರ ಪ್ಯಾಕೇಜ್ ಘೋಷಿಸಿದೆ ಎಂಬುದನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
'ಆದರೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಾಗ ಷರತ್ತು ವಿಧಿಸಲಾಗಿದೆ. ಹಣವನ್ನು ಸಾಮಾನ್ಯ ಅನುದಾನದ ರೀತಿಯಲ್ಲಿ ವಿತರಿಸದೆ, ಸಾಲದ ರೂಪದಲ್ಲಿ ವಿತರಿಸಬೇಕು ಎಂದು ಹೇಳಿದೆ. ಮಾತ್ರವಲ್ಲ, ಪರಿಹಾರದ ಮೊತ್ತವನ್ನು 2025ರ ಮಾರ್ಚ್ 31ರ ಒಳಗಾಗಿ ಸಂಪೂರ್ಣ ಖರ್ಚು ಮಾಡುವಂತೆಯೂ ತಿಳಿಸಿದೆ. ಈ ಷರತ್ತುಗಳಿಂದ ಸಂತ್ರಸ್ತರಿಗೆ ಅನ್ಯಾಯವಾಗಿದೆ' ಎಂದಿದ್ದಾರೆ.
'ಪರಿಹಾರ ಪ್ಯಾಕೇಜ್ ಅನ್ನು ಅನುದಾನವಾಗಿ ಪರಿವರ್ತಿಸಲು ಮತ್ತು ಅದರ ಅನುಷ್ಠಾನಕ್ಕೆ ಕಾಲಾವಧಿಯನ್ನು ವಿಸ್ತರಿಸುವಂತೆ ವಿನಂತಿಸುತ್ತೇನೆ. ಇದು, ಭೂಕುಸಿತದಲ್ಲಿ ಎಲ್ಲವನ್ನೂ ಕಳೆದುಕೊಂಡ ಜನರ ಜೀವನವನ್ನು ಮರುನಿರ್ಮಾಣ ಮಾಡಲು ಸಹಾಯ ಮಾಡುತ್ತದೆ' ಎಂದಿದ್ದಾರೆ.