ನವದೆಹಲಿ: ನಿವೃತ್ತ ಸೇನಾ ಅಧಿಕಾರಿ ವಿರುದ್ಧ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಸಲ್ಲಿಸಲಾಗಿದ್ದ ದೋಷಾರೋಪ ಪಟ್ಟಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
'ಇದು ಕಾನೂನು ಪ್ರಕ್ರಿಯೆಯ ನಿಂದನೆ' ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಸುದಾಂಶು ಧುಲಿಯಾ ಮತ್ತು ಕೆ.ವಿನೋದ್ ಚಂದ್ರನ್ ಅವರನ್ನು ಒಳಗೊಂಡ ನ್ಯಾಯಪೀಠವು, ಕ್ಯಾ.ರಾಕೇಶ್ ವಾಲಿಯಾ (ನಿವೃತ್ತ) ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿತು.
ದೋಷಾರೋಪ ಪಟ್ಟಿಯನ್ನು ವಜಾ ಮಾಡದೆ ದೆಹಲಿ ಹೈಕೋರ್ಟ್ ದೊಡ್ಡ ತಪ್ಪು ಮಾಡಿದೆ ಎಂದು ನ್ಯಾಯಪೀಠ ಹೇಳಿತು.
ದೋಷಾರೋಪ ಪಟ್ಟಿ ವಿರುದ್ಧದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದನ್ನು ಪ್ರಶ್ನಿಸಿ ವಾಲಿಯಾ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
'ಮಹಿಳೆಯು ಸುಳ್ಳು ಆರೋಪ ಮಾಡಿದ್ದಾರೆ. ವಾಲಿಯಾ ಮಾತ್ರವಲ್ಲದೆ ಹಲವರ ವಿರುದ್ಧ ಇಂಥದ್ದೇ ಪ್ರಕರಣ ಸಂಬಂಧ ಎಫ್‌ಐಆರ್‌ಗಳು ದಾಖಲಾಗಿವೆ. ಹಣಕ್ಕಾಗಿ ಈ ರೀತಿ ವಂಚನೆ ಮಾಡುತ್ತಿದ್ದಾರೆ' ಎಂದು ರಾಕೇಶ್ ವಾಲಿಯಾ ಪರ ವಕೀಲರು ವಾದಿಸಿದರು.