ವಾಷಿಂಗ್ಟನ್: ವೈಯಕ್ತಿಕ ವಿಚಾರಗಳ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಚರ್ಚಿಸಿಲ್ಲ ಎಂದು ಭಾರತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಮೋದಿ, ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಉಭಯ ನಾಯಕರ ಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ ಅವರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಗಿದೆಯೇ ಎಂಬ ಪ್ರಶ್ನೆಗೆ ಮೋದಿ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಟ್ರಂಪ್ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮೋದಿ, 'ಮೊದಲಿಗೆ ಭಾರತ ಪ್ರಜಾಪ್ರಭುತ್ವ ದೇಶ. 'ವಸುದೈವ ಕುಟುಂಬಕಮ್' ಎಂಬುದು ನಮ್ಮ ಸಂಸ್ಕೃತಿ, ಚಿಂತನೆ. ಇಡೀ ಜಗತ್ತು ಒಂದು ಕುಟುಂಬ ಎಂಬುದು ಅದರ ಅರ್ಥ' ಎಂದು ಹೇಳಿದ್ದಾರೆ. ಆ ಮೂಲಕ, ಎರಡೂ ರಾಷ್ಟ್ರಗಳ ಬಾಂಧವ್ಯವನ್ನು ಪ್ರತಿಪಾದಿಸಿದ್ದಾರೆ. ಮುಂದುವರಿದು, 'ಪ್ರತಿಯೊಬ್ಬ ಭಾರತೀಯನೂ ನನ್ನ ಸ್ವಂತ ಕುಟುಂಬದ ಸದಸ್ಯ. ಆದರೆ, ಅಂತಹ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ, ಎರಡು ರಾಷ್ಟ್ರಗಳ ನಾಯಕರು ಒಟ್ಟಿಗೆ ಸೇರುವುದಿಲ್ಲ ಮತ್ತು ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚಿಸುವುದಿಲ್ಲ' ಎಂದು ಹೇಳಿದ್ದಾರೆ. ಆ ಮೂಲಕ ಅದಾನಿ ವಿಚಾರದ ಬಗ್ಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷರೂ ಅದಾನಿ ವಿಚಾರದ ಬಗ್ಗೆ ಪ್ರಸ್ತಾಪಿಸಲಿಲ್ಲ.
ಅಮೆರಿಕದ ಹೂಡಿಕೆದಾರರನ್ನು ವಂಚಿಸಲು ಭಾರತದ ಅಧಿಕಾರಿಗಳಿಗೆ ಭಾರಿ ಪ್ರಮಾಣದ ಲಂಚ ನೀಡಿದ ಆರೋಪ ಉದ್ಯಮಿ ಅದಾನಿ ಅವರ ಮೇಲಿದೆ.
ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ 'ಅದಾನಿ ಗ್ರೀನ್ ಎನರ್ಜಿ' ಕಂಪನಿಯ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಇತರರ ವಿರುದ್ಧ 2024ರ ನವೆಂಬರ್‌ನಲ್ಲಿ ಅಮೆರಿಕದ ಪ್ರಾಸಿಕ್ಯೂಟರ್ ಕ್ರಿಮಿನಲ್ ಆರೋಪಪಟ್ಟಿ ಸಲ್ಲಿಸಿದ್ದಾರೆ.