ನವದೆಹಲಿ: ಈ ಹಿಂದೆ ಆಡಳಿತ ನಡೆಸಿರುವ ಎಎಪಿ ಪಕ್ಷ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿದೆ ಎಂದು ಆರೋಪಿಸಿರುವ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ವಿಸ್ತ್ರತವಾಗಿ ಯೋಜಿಸಿ ಮಹಿಳೆಯರಿಗೆ ಪ್ರತಿ ತಿಂಗಳು ₹2,500 ಹಣ ನೀಡುವ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿದರು.
ದೆಹಲಿ ವಿಧಾನಸಭೆ ಅಧಿವೇಶನದ ಹಿನ್ನೆಲೆ ಪಕ್ಷದ ಕಚೇರಿಯಲ್ಲಿ ಬಿಜೆಪಿ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, 'ಮಹಿಳಾ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ₹2,500 ನೀಡುವ ಯೋಜನೆಯ ಕುರಿತು ಅಧಿಕಾರಿಗಳೊಂದಿಗೆ ವಿವಿಧ ಹಂತದಲ್ಲಿ ಸಭೆ ನಡೆಸಲಾಗಿದೆ. ಹಿಂದಿನ ಸರ್ಕಾರ ಬಿಟ್ಟುಹೋದ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಪರಿಶೀಲಿಸಿದಾಗ, ರಾಜ್ಯದ ಬೊಕ್ಕಸ ಖಾಲಿಯಾಗಿರುವುದು ಗೊತ್ತಾಗಿದೆ. ಹೀಗಿದ್ದರೂ, ಖಂಡಿತವಾಗಿಯೂ ಯೋಜನೆಯನ್ನು ಜಾರಿಗೊಳಿಸಿ ಅರ್ಹ ಮಹಿಳೆಯರಿಗೆ ಹಣ ಸಿಗುವಂತೆ ಮಾಡಲಾಗುತ್ತದೆ' ಎಂದರು.
ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚದೇವ್ ಮಾತನಾಡಿ, 'ದೆಹಲಿಯ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳನ್ನು ನಿವಾರಿಸುವುದೇ ಬಿಜೆಪಿ ಸರ್ಕಾರದ ಕಾರ್ಯಸೂಚಿಯಾಗಿದೆ' ಎಂದರು.