ಕಾಸರಗೋಡು: ನಗರದ ಸೂರ್ಲು ನಿವಾಸಿ, ವಿದ್ಯಾನಗರ ಪಡುವಡ್ಕದಲ್ಲಿ ವಾಸ್ತವ್ಯವಿದ್ದ ಯೂತ್‍ಕಾಂಗ್ರೆಸ್ ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷ ಬಾಲಕೃಷ್ಣನ್(28)ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದ ಆರೋಪಿಗಳಿಬ್ಬರನ್ನು ಹೈಕೋರ್ಟು ಖುಲಾಸೆಗೊಳಿಸಿದೆ.
ಕಾಸರಗೋಡು ಚಟ್ಟಂಚಾಲ್ ಕುನಿಕುನ್ನು ಪಾದೂರ್ ರಸ್ತೆ ಸನಿಹದ ನಿವಾಸಿ ಮಹಮ್ಮದ್ ಇಕ್ಬಾಲ್ ಯಾನೆ ಇಕ್ಕು ಹಾಗೂ ಕಾಸರಗೋಡು ತಳಂಗರೆ ನಿವಾಸಿ ಮಹಮ್ಮದ್ ಹನೀಫ್ ಯಾನೆ ಜಾಕಿ ಹನೀಫ್ ಖುಲಾಸೆಗೊಂಡವರು. ಇವರು ಪ್ರಕರಣದ ಒಂದು ಮತ್ತು ಎರಡನೇ ಆರೋಪಿಗಳಾಗಿದ್ದಾರೆ. ಯುವ ಕಾಂಗ್ರೆಸ್ ಮುಖಂಡರಾಗಿದ್ದ ಬಾಲಕೃಷ್ಣನ್ ಅವರು ಮುಸ್ಲಿಂ ಸಮುದಾಯದ ಯುವತಿಯನ್ನು ವಿವಾಹವಾಗಿದ್ದ ಸೇಡಿನಲ್ಲಿ 2001 ಸೆ. 18ರಂದು ಬಾಲಕೃಷ್ಣನ್ ಅವರನ್ನು ನಗರದ ನುಳ್ಳಿಪ್ಪಾಡಿಯಿಂದ ಉಪಾಯದಿಂದ ಕಾರಿನಲ್ಲಿ ಕರೆದೊಯ್ದು, ಪಿಲಿಕುಂಜೆಯ ಚಂದ್ರಗಿರಿ ಸೇತುವೆ ಸನಿಹ ಬರ್ಬರವಾಗಿ ಇರಿದು ಕೊಲೆಗೈಯಲಾಗಿತ್ತು. ಕೊಲೆ ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದು, ನಂತರ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡಲಾಗಿತ್ತು. ಸಿಬಿಐ ಒಟ್ಟು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇವರಲ್ಲಿ ಮೂರು ಮಂದಿಯ ಮೇಲಿನ ಆರೋಪ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಉಳಿದ ಇಬ್ಬರು ಆರೋಪಿಗಳಾದ ಮಹಮ್ಮದ್ ಇಕ್ಬಾಲ್ ಹಾಗೂ ಮಹಮ್ಮದ್ ಹನೀಫ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ತೀರ್ಪು ಪ್ರಶ್ನಿಸಿ ಆರೋಪಿಗಳು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದು, ಅರ್ಜಿ ಪರಿಗಣಿಸಿದ ನ್ಯಾಯಾಲಯದ ವಿಭಾಗೀಯ ಪೀಠ ಇಬ್ಬರೂ ಆರೋಪಿಗಳನ್ನು ಖುಲಾಸೆಗೊಳಿಸಿದೆ.