ನವದೆಹಲಿ: 10 ಮತ್ತು 12ನೇ ತರಗತಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಹಬ್ಬಿಸಲಾಗಿದೆ. ಈ ಬಗ್ಗೆ ಪೋಷಕರು ಎಚ್ಚರವಹಿಸಬೇಕು ಎಂದು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ತಿಳಿಸಿದೆ.
ಸುಳ್ಳು ಮಾಹಿತಿ ಹರಡುತ್ತಿರುವವರ ವಿರುದ್ಧ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
'2025ನೇ ಸಾಲಿನ ವಾರ್ಷಿಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದಾಗಿ ಕೆಲವು ದುಷ್ಟ ಶಕ್ತಿಗಳು ಯೂಟ್ಯೂಬ್, ಫೇಸ್‌ಬುಕ್, 'ಎಕ್ಸ್' ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹಬ್ಬಿಸಿವೆ. ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಭೀತಿಯನ್ನುಂಟು ಮಾಡಲು ಈ ರೀತಿ ವದಂತಿ ಹಬ್ಬಿಸಲಾಗಿದೆ. ಮಂಡಳಿಯು ಈ ಬಗ್ಗೆ ನಿಗಾವಹಿಸಿದೆ' ಎಂದು ತಿಳಿಸಿದ್ದಾರೆ.
'ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎನ್ನಲಾದ ವದಂತಿಗಳನ್ನು ನಂಬದಂತೆ ಪೋಷಕರು ವಿದ್ಯಾರ್ಥಿಗಳಿಗೆ ತಿಳಿವಳಿಕೆ ಹೇಳಬೇಕು. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಮಂಡಳಿಯ ಅಧಿಕೃತ ಜಾಲತಾಣದಿಂದ ಪಡೆಯಬೇಕು' ಎಂದು ಹೇಳಿದ್ದಾರೆ.
ಸಿಬಿಎಸ್‌ಇ ಶಾಲೆಗಳ 2025ನೇ ಸಾಲಿನ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯು ಫೆ.15ರಂದು ಆರಂಭವಾಗಿದ್ದು, ಏ.4ರಂದು ಮುಕ್ತಾಯವಾಗಲಿವೆ.