ವಾಷಿಂಗ್ಟನ್: 'ಟ್ರಂಪ್, ಮೆಲೋನಿ, ಮೋದಿ ಜೊತೆಗೂಡಿ ಮಾತನಾಡಿದರೆ ಅದನ್ನು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂಬಂತೆ ಬಿಂಬಿಸಲಾಗುತ್ತದೆ. ಅದೇ ಎಡಪಕ್ಷಗಳ ನಾಯಕರು ನಡೆಸಿದರೆ ಪ್ರಶಂಸಿಸಲಾಗುತ್ತದೆ' ಎಂದು ಇಟಲಿ ಪ್ರಧಾನಿ ಜಾರ್ಜಿಯ ಮೆಲೋನಿ ಹೇಳಿದ್ದಾರೆ.
ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ಕನ್ಸರ್ವೇಟಿವ್ ಪೊಲಿಟಿಕಲ್ ಆಕ್ಷನ್ ಕಾನ್ಫರೆನ್ಸ್ (CHPAC) ಉದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿದ ಮೆಲೋನಿ, ಬಲಪಂಥೀಯರ ಬಗ್ಗೆ ಎಡ ಉದಾರವಾದಿಗಳ ದ್ವಂದ್ವ ನೀತಿಯನ್ನು ಬಹಿರಂಗವಾಗಿ ಟೀಕಿಸಿದ್ದಾರೆ.
ಇದೇ ವೇಳೆ ಅಮೆರಿಕ ಚುನಾವಣೆಯಲ್ಲಿ ಟ್ರಂಪ್ ಗೆಲುವನ್ನು ಪ್ರಶಂಸಿಸಿರುವ ಮೆಲೋನಿ, ಟ್ರಂಪ್ ಗೆಲುವು ಎಡಪಕ್ಷಗಳಲ್ಲಿ ನಡುಕ ಹುಟ್ಟಿಸಿದೆ ಎಂದಿದ್ದಾರೆ.
'ಸಂಪ್ರದಾಯವಾದಿಗಳು(ಕನ್ಸರ್ವೇಟಿವ್ಸ್) ಗೆಲ್ಲುತ್ತಿರುವುದು ಮತ್ತು ಜಾಗತಿಕವಾಗಿ ಒಬ್ಬರಿಗೊಬ್ಬರು ಸಹಕರಿಸುತ್ತಿರುವುದು ಅವರಿಗೆ (ಎಡಪಂಥೀಯರಿಗೆ) ಕಿರಿಕಿರಿ ಉಂಟು ಮಾಡುತ್ತಿದೆ. ಅದು ಈಗ ಉನ್ಮಾದಕ್ಕೆ ಹೋಗಿದೆ' ಎಂದು ಹೇಳಿದ್ದಾರೆ.
'90ರ ದಶಕದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಮಾಜಿ ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಅವರು ಜಾಗತಿಕ ಎಡ ಉದಾರವಾದಿಗಳ ನೆಟ್‌ವರ್ಕ್ ರಚಿಸಿದಾಗ ಅವರನ್ನು ನೈಜ ರಾಜಕಾರಣಿಗಳು ಎಂದು ಕರೆಯಲಾಯಿತು. ಅದೇ ಈಗ ನಾನು, ಡೊನಾಲ್ಡ್ ಟ್ರಂಪ್, ಅರ್ಜೇಂಟೀನಾದ ಅಧ್ಯಕ್ಷ ಜೇವಿಯರ್ ಮಿಲಿ, ನರೇಂದ್ರ ಮೋದಿ ಅವರು ಮಾತನಾಡಿದರೆ ಅದನ್ನು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂಬಂತೆ ಬಿಂಬಿಸಲಾಗುತ್ತದೆ' ಎಂದರು.
'ಎಡಪಂಥೀಯರ ಈ ದ್ವಂದ್ವ ನೀತಿಗಳು ನಮಗೆ ಅಭ್ಯಾಸವಾಗಿಬಿಟ್ಟಿವೆ. ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಕಾಲ ಮುಗಿದಿದೆ. ಇವೆಲ್ಲದರ ನಡುವೆಯೂ ಜನರು ನಮಗೆ ಮತ ಹಾಕುವುದನ್ನು ಮುಂದುವರಿಸುತ್ತಿದ್ದಾರೆ. ಎಡಪಂಥೀಯರು ಪರಿಗಣಿಸುವಷ್ಟು ಜನರು ನಿಷ್ಕಪಟರಲ್ಲ' ಎಂದು ಹೇಳಿದ್ದಾರೆ.
'ಅಧ್ಯಕ್ಷ ಟ್ರಂಪ್ ಅವರು ನಮ್ಮಿಂದ(ಯುರೋಪ್ ಒಕ್ಕೂಟ) ದೂರ ಹೋಗುತ್ತಾರೆ ಎಂದು ನಮ್ಮ ವಿರೋಧಿಗಳು ನಿರೀಕ್ಷಿಸಿದ್ದರು. ಆದರೆ, ಅವರ ಎಣಿಕೆ ತಪ್ಪಾಗಲಿದೆ ಎಂಬ ನಂಬಿಕೆ ನನಗಿದೆ' ಎಂದು ಹೇಳಿದ್ದಾರೆ.