ನವದೆಹಲಿ: 1984ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಕೊಲೆ ಪ್ರಕರಣವೊಂದರ ಅಪರಾಧಿ, ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ದೆಹಲಿ ನ್ಯಾಯಾಲಯ ಆದೇಶ ಹೊರಡಿಸಿದೆ.
ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.
ಸಿಖ್ ವಿರೋಧಿ ದಂಗೆಯ ವೇಳೆ(1984ರ ನವೆಂಬರ್ 1ರಂದು) ಸರಸ್ವತಿ ವಿಹಾರ್ ಬಳಿ ಜಸ್ವಂತ್ ಸಿಂಗ್ ಹಾಗೂ ಅವರ ಪುತ್ರ ತರುಣ್‌ದೀಪ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಅವರಿಗೆ ಮರಣದಂಡನೆ ವಿಧಿಸುವಂತೆ ಜಸ್ವಂತ್ ಅವರ ಪತ್ನಿ ಕೋರಿದ್ದರು.
ಸದ್ಯ ಸಜ್ಜನ್ ಕುಮಾರ್ ತಿಹಾರ್ ಕಾರಾಗೃಹದಲ್ಲಿದ್ದಾರೆ. ಫೆ.12ರಂದು ನ್ಯಾಯಾಲಯವು ಸಜ್ಜನ್ ಕುಮಾರ್ ಪ್ರಕರಣದ ಅಪರಾಧಿ ಎಂದು ಪರಿಗಣಿಸಿ ತೀರ್ಪು ನೀಡಿತ್ತು. ಸಜ್ಜನ್ ಕುಮಾರ್ ಮಾನಸಿಕ ಸ್ಥಿತಿಯ ಬಗ್ಗೆ ವರದಿ ನೀಡುವಂತೆ ನ್ಯಾಯಾಲಯವು ತಿಹಾರ್ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.