ನವದೆಹಲಿ: 'ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಾಗಿ ಮಣಿಪುರದ ನಾಗರಿಕರು ಕಾಯುತ್ತಲೇ ಇದ್ದಾರೆ. ಆದರೆ, ಅಲ್ಲಿಗೆ ಭೇಟಿ ನೀಡದೇ ಮೋದಿ ನಿರಾಸೆ ಉಂಟು ಮಾಡುತ್ತಿದ್ದಾರೆ' ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದೆ.
ಪ್ರಧಾನಿ ಮೋದಿ ಅವರು ಮಧ್ಯಪ್ರದೇಶ, ಬಿಹಾರ ಮತ್ತು ಅಸ್ಸಾಂ ರಾಜ್ಯಗಳಿಗೆ ಭಾನುವಾರದಿಂದ ಪ್ರವಾಸ ಆರಂಭಿಸಿರುವ ಹಿಂದೆಯೇ ಕಾಂಗ್ರೆಸ್ ಪಕ್ಷ ಈ ಹೇಳಿಕೆ ನೀಡಿದೆ.
ಸೋಮವಾರ ಅಸ್ಸಾಂಗೆ ಭೇಟಿ ನೀಡಿದಾಗ 9000 ಕಲಾವಿದೆಯರು ಪ್ರಸ್ತುತಪಡಿಸಿದ ನೃತ್ಯ ವೀಕ್ಷಿಸಿದ ಪ್ರಧಾನಿ, ಸಾಂಪ್ರದಾಯಿಕ 'ಧೋಮ್ಸಾ' ಡೋಲು ಬಾರಿಸಿದ್ದರು. ಮಂಗಳವಾರ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿದ್ದರು.
ಮೋದಿ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಮೋದಿ ನೇರವಾಗಿ ಯಾವಾಗ ಮಣಿಪುರದ ಜನರನ್ನು ಭೇಟಿ ಮಾಡುವರು?' ಎಂದು ಪ್ರಶ್ನಿಸಿದ್ದಾರೆ.
'ಎಕ್ಸ್' ಜಾಲತಾಣದಲ್ಲಿ ಈ ಕುರಿತು ಅವರು, 'ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯಕ್ಕಾಗಿ ಪ್ರಧಾನಿ ಅಲ್ಲಿನ ಜನರ ಕ್ಷಮೆ ಕೇಳಬೇಕು' ಎಂದು ಒತ್ತಾಯಿಸಿದ್ದಾರೆ.