ನವದೆಹಲಿ: 'ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಿಜೆಪಿ ನಾಯಕರ ಪಾತ್ರವೂ ಇದೆ. ಈ ಬಗ್ಗೆ ನಾವು ತನಿಖಾ ಸಂಸ್ಥೆಗೆ ಸಾಕ್ಷ್ಯಗಳ ಸಮೇತ ಲಿಖಿತ ದೂರು ನೀಡಿದ್ದೇವೆ. ಆದ್ದರಿಂದ ಹಗರಣದ ಕುರಿತು ನಡೆಯುತ್ತಿರುವ ತನಿಖೆಯ ವ್ಯಾಪ್ತಿ ವಿಸ್ತರಣೆಯಾಗಬೇಕು' ಎಂದು ಕಾಂಗ್ರೆಸ್ ಬುಧವಾರ ಒತ್ತಾಯಿಸಿದೆ.
ಅಬಕಾರಿ ನೀತಿ ಹಗರಣದಿಂದ ದೆಹಲಿ ಸರ್ಕಾರಕ್ಕೆ ₹2,000 ಕೋಟಿ ನಷ್ಟವಾಗಿದೆ ಎಂಬ 2021-22ನೇ ಸಾಲಿನ ಸಿಎಜಿ ವರದಿಯನ್ನು ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಮಂಗಳವಾರ ಅಧಿವೇಶನದಲ್ಲಿ ಮಂಡಿಸಿದ್ದರು. ಈ ಬಗ್ಗೆ ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ದೇವೆಂದ್ರ ಯಾದವ್ ಹಾಗೂ ಪಕ್ಷದ ನಾಯಕ ಸಂದೀಪ್ ದೀಕ್ಷಿತ್ ಅವರು ಮಾಧ್ಯಮ ಗೋಷ್ಠಿ ನಡೆಸಿದರು.
'ದೆಹಲಿ ಸರ್ಕಾರವು ಕೂಡಲೇ ಸಾರ್ವಜನಿಕ ಲೆಕ್ಕಪತ್ರ ಸಮಿತಿಯನ್ನು (ಪಿಎಸಿ) ರಚಿಸಬೇಕು. ಸಿಎಜಿ ವರದಿಯನ್ನು ಈ ಸಮಿತಿ ಪರಿಶೀಲಿಸಬೇಕು. ಹಗರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಶಿಕ್ಷೆಯಾಗಬೇಕು. ಸಮಿತಿಗೆ ಯಾವಾಗಲೂ ವಿರೋಧ ಪಕ್ಷದ ನಾಯಕ ಅಧ್ಯಕ್ಷನಾಗಿರಬೇಕು. ಆದರೆ, ಇಲ್ಲಿಯವರೆಗೂ ದೆಹಲಿ ಸರ್ಕಾರವೇ ಈ ಸಮಿತಿಯ ಅಧ್ಯಕ್ಷತೆ ವಹಿಸಿಕೊಂಡಿದೆ. ಆದ್ದರಿಂದ, ಸಿಎಜಿಯ ಎಲ್ಲ ವರದಿಗಳನ್ನು ಸಾರ್ವಜನಿಕರ ಮುಂದಿಡಬೇಕು' ಎಂದರು.
ದೇವೇಂದ್ರ ಯಾದವ್ ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷಒಟ್ಟು 14 ಸಿಎಜಿ ವರದಿಗಳಿವೆ. ಈ ಎಲ್ಲವನ್ನೂ ಅಧಿವೇಶನದಲ್ಲಿ ಏಕೆ ಮಂಡಿಸಿಲ್ಲ. ಒಂದು ಸಿಎಜಿ ವರದಿಯನ್ನು ಮಾತ್ರವೇ ಬಿಜೆಪಿ ಸರ್ಕಾರ ಮಂಡಿಸಿದೆ
'ಹಗರಣದಲ್ಲಿ ಅಂದಿನ ಎಲ್‌ಜಿಯೂ ಭಾಗಿ'
'ಕೆಲವು ಬಿಜೆಪಿ ನಾಯಕರು ಹಾಗೂ ಅಂದಿನ ಲೆಫ್ಟಿನೆಂಟ್ ಗವರ್ನರ್ ಕುರಿತು ಹಲವು ಪ್ರಮುಖ ಪ್ರಶ್ನೆಗಳು ಉದ್ಭವ ವಾಗುತ್ತವೆ. ಹಗರಣದಲ್ಲಿ ಈ ಎಲ್ಲರ ಕೈವಾಡವೂ ಇದೆ. ಇದನ್ನು ಸಿಎಜಿ ವರದಿ ನಿರ್ಲಕ್ಷಿಸಿದೆ' ಎಂದು ದೇವೇಂದ್ರ ಯಾದವ್ ಹೇಳಿದರು. 'ಒಂದೇ ವರ್ಷದಲ್ಲಿ ಮೂವರು ಅಬಕಾರಿ ನಿರ್ದೇಶಕರನ್ನು ಬದಲಾವಣೆ ಮಾಡುವ ನಿರ್ಧಾರವನ್ನು ಯಾರು ಮತ್ತು ಯಾಕಾಗಿ ತೆಗೆದುಕೊಳ್ಳಲಾಯಿತು. ಮದ್ಯದ ಹೊಸ ಹೊಸ ಬ್ರ್ಯಾಂಡ್‌ಗಳನ್ನು ದೆಹಲಿಯಲ್ಲಿ ಪರಿಚಯಿಸಲಾಯಿತು. ಈ ಬಗ್ಗೆ ತನಿಖೆ ನಡೆಯಲಿ. ಕೇಜ್ರಿವಾಲ್ ಸರ್ಕಾರದ ಅಬಕಾರಿ ನೀತಿಗೆ ಅಂದಿನ ಲೆಫ್ಟಿನೆಂಟ್ ಗರ್ವನರ್ ಒಪ್ಪಿಗೆ ನೀಡಿದ್ದರು. ಈ ಬಗ್ಗೆ ಯಾಕೆ ಇಲ್ಲಿಯವರೆಗೂ ತನಿಖೆ ನಡೆದಿಲ್ಲ' ಎಂದು ಪ್ರಶ್ನಿಸಿದರು.
'ಎಂಸಿಡಿ: ಅಧಿಕಾರದಲ್ಲಿದ್ದ ಬಿಜಿಪಿ'
'ಮಾಸ್ಟರ್ ಪ್ಲ್ಯಾನ್ ಉಲ್ಲಂಘಿಸಿ ಹೊಸ ಹೊಸ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಲಾಯಿತು. ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಅನುಮತಿ ಇಲ್ಲದೆ ಹೊಸ ಪರವಾನಗಿಗಳನ್ನು ನೀಡಲು ಸಾಧ್ಯವಿಲ್ಲ. ಹಗರಣ ನಡೆದ ಸಮಯದಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಬಿಜೆಪಿ ಆಡಳಿತವಿತ್ತು. ಜೊತೆಗೆ ಅಷ್ಟೇನು ಮದ್ಯ ಮಾರಾಟ ನಡೆಯದಂಥ ಪ್ರದೇಶಗಳಲ್ಲಿಯೂ ಹೊಸ ಮದ್ಯದ ಅಂಗಡಿಗಳನ್ನು ತೆರೆಯಲು ಎಎಪಿ ನೇತೃತ್ವದ ದೆಹಲಿ ಸರ್ಕಾರಕ್ಕೆ ಬಿಜೆಪಿ ಅನುವು ಮಾಡಿಕೊಟ್ಟಿತು' ಎಂದು ದೇವೆಂದ್ರ ಯಾದವ್ ಆರೋಪಿಸಿದರು.
'ಇತರೆ ರಾಜ್ಯದ ರಾಜಕಾರಣಿಗಳ ನಂಟು'
'ಅಬಕಾರಿ ನೀತಿಯಲ್ಲಿ ಮೊದಲಿಗೆ 77 ಮದ್ಯ ವಿತರಕ ಕಂಪನಿಗಳಿದ್ದವು. ಇದನ್ನು 14ಕ್ಕೆ ಕಡಿತ ಮಾಡಲಾಯಿತು. ಎಲ್ಲ 14 ಕಂಪನಿಗಳೂ ಪರಸ್ಪರ ಸಂಬಂಧವಿದೆ. ಇವು ಎಎಪಿ ಸರ್ಕಾರದ ಜೊತೆಗೆ ಸಂಬಂಧ ಹೊಂದಿರುವ ದೇಶದ ಬೇರೆ ಬೇರೆ ಭಾಗಗಳ ರಾಜಕಾರಣಿಗಳು ಮತ್ತವರ ಕುಟುಂಬ ಸದಸ್ಯರ ಒಡೆತನದ ಕಂಪನಿಗಳಾಗಿವೆ' ಎಂದು ಸಂದೀಪ್ ದೀಕ್ಷಿತ್ ಹೇಳಿದರು.
'ದಾಖಲೆ ಹಸ್ತಾಂತರಿಸಿ'
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ಚಾರ್ಜ್‌ಶೀಟ್‌ಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಆರೋಪಿಗಳಿಗೆ ಹಸ್ತಾಂತರಿಸಿ ಎಂದು ತನಿಖಾ ಸಂಸ್ಥೆಗೆ ದೆಹಲಿ ನ್ಯಾಯಾಲವೊಂದು ಬುಧವಾರ ಸೂಚಿಸಿದೆ. ಹಗರಣ ಸಂಬಂಧ ಚಾರ್ಚ್‌ಶೀಟ್ ಸೇರಿದಂತೆ ವಿವಿಧ ದಾಖಲೆಗಳ ಬಗ್ಗೆ ನ್ಯಾಯಾಲಯವು ಸದ್ಯ ಪರಿಶೀಲನೆ ನಡೆಸುತ್ತಿದೆ. ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಮುಂದಿನ ವಿಚಾರಣೆಯನ್ನು ಮಾರ್ಚ್ 3ಕ್ಕೆ ನಿಗದಿ ಮಾಡಿದರು.