ಜೈಪುರ: 'ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ಹೆಚ್ಚು ಅನುದಾನ ಮೀಸಲಿಟ್ಟಿರುವ ಕೇಂದ್ರ ಸರ್ಕಾರ ನಿರ್ಧಾರವನ್ನು ನಾನು ಬೆಂಬಲಿಸುತ್ತೇನೆ. ಏಕೆಂದರೆ ಇದು ಭಾರತ ದುರ್ಬಲ ದೇಶವಲ್ಲ ಮತ್ತು ಕ್ಷುಲ್ಲಕವಲ್ಲ ಎಂಬ ಸಂದೇಶವನ್ನು ಇತರೆ ರಾಷ್ಟ್ರಗಳಿಗೆ ಸಾರಬೇಕಾಗಿದೆ' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಜೈಪುರ ಸಾಹಿತ್ಯೋತ್ಸವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಭಾರತ-ಚೀನಾ ಗಡಿಯಲ್ಲಿ ನಡೆದಿದ್ದ ಅಹಿತಕರ ಘಟನೆ ಮರುಕಳಿಸಬಾರದು. ಹಾಗಾಗಿ ರಕ್ಷಣಾ ಇಲಾಖೆಗೆ ಹೆಚ್ಚು ಹಣ ಖರ್ಚು ಮಾಡುವುದು ಮುಖ್ಯ' ಎಂದು ತಿಳಿಸಿದ್ದಾರೆ.
'ನಾವು ಯುದ್ಧವನ್ನು ಮಾಡುವುದಕ್ಕಾಗಿಯೇ ರಕ್ಷಣಾ ಇಲಾಖೆಗೆ ಅನುದಾನ ಮೀಸಲು ಇಡುವುದಿಲ್ಲ. ಬದಲಾಗಿ ನಾವು ದುರ್ಬಲರು ಎಂದು ಭಾವಿಸಿ ನಮ್ಮ ವಿರುದ್ಧ ಯುದ್ಧ ಮಾಡಬಹುದು ಎಂಬ ಭಾವನೆ ಹೊಂದಿರುವ ಶತ್ರು ರಾಷ್ಟ್ರದವರನ್ನು ನಿರುತ್ಸಾಹಗೊಳಿಸುವುದಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.
'ವಾಸ್ತವವಾಗಿ ನಮ್ಮ ರಕ್ಷಣಾ ಬಜೆಟ್ ಅನ್ನು ಹೆಚ್ಚಿಸಬೇಕಾಗಿದೆ ಎಂದು ನಾನು ಹಲವು ವರ್ಷಗಳಿಂದ ಹೇಳುತ್ತಿದ್ದೇನೆ. ಕಾರ್ಗಿಲ್ ಯುದ್ಧದಲ್ಲಿ ನಾವು ಅನೇಕ ಅಧಿಕಾರಿಗಳನ್ನು ಕಳೆದುಕೊಂಡಿದ್ದೇವೆ. ಸದ್ಯ ಸೇನೆಯಲ್ಲಿ ಅಧಿಕಾರಿಗಳ ಕೊರತೆ ಇದೆ. ಹಾಗೆಯೇ ಬೃಹತ್ ಕರಾವಳಿ ಹೊಂದಿರುವುದರಿಂದ ನಾವು ಬಲವಾದ ನೌಕಾಪಡೆಯನ್ನು ಸಜ್ಜುಗೊಳಿಸಬೇಕಿದೆ' ಎಂದು ತರೂರ್ ಪ್ರತಿಪಾದಿಸಿದ್ದಾರೆ.