ಚೆನ್ನೈ: ಭಾಷೆ ಎಂಬ ಗಂಭೀರ ವಿಷಯವನ್ನು ಕ್ಷುಲ್ಲಕಗೊಳಿಸಿರುವ ಬಿಜೆಪಿ ಮತ್ತು ಆಡಳಿತಾರೂಢ ಡಿಎಂಕೆ ಪಕ್ಷಗಳು ಸಾಮಾಜಿಕ ಮಾಧ್ಯಮದಲ್ಲಿ ಎಳೆಸುಗಳಂತೆ ಕಿತ್ತಾಡುತ್ತಿದ್ದಾರೆ ಎಂದು ನಟ, ರಾಜಕಾರಣಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸ್ಥಾಪಕ ವಿಜಯ್ ಆರೋಪಿಸಿದ್ದಾರೆ.
ಪಕ್ಷದ ವಾರ್ಷಿಕೋತ್ಸವ ಸಂಭ್ರಮಾಚರಣೆ ವೇಳೆ ಮಾಮಲ್ಲಪುರಂನಲ್ಲಿ ಮಾತನಾಡಿದ ವಿಜಯ್, ಬಿಜೆಪಿಯು ಡಿಎಂಕೆ ಪಕ್ಷದ #ಗೆಟ್‌ಔಟ್‌ಮೋದಿ ಅಭಿಯಾನಕ್ಕೆ #ಗೆಟ್‌ಔಟ್‌ಸ್ಟಾಲಿನ್ ಎನ್ನುವ ಅಭಿಯಾನ ಮಾಡಿತು. ಈ ಹ್ಯಾಷ್‌ಟ್ಯಾಗ್ ಜಗಳ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳ ಕಿತ್ತಾಟದಂತಾಗಿದೆ ಎಂದರು.
ರಾಜ್ಯಗಳಿಗೆ ಅನುದಾನ ಕೊಡುವುದು ಕೇಂದ್ರದ ಕರ್ತವ್ಯ, ಅದನ್ನು ಪಡೆಯುವುದು ರಾಜ್ಯಗಳ ಹಕ್ಕು. ಆದರೆ ನಮ್ಮ ರಾಜಕೀಯ ಮತ್ತು ಸಿದ್ಧಾಂತ ವಿರೋಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಷ್‌ಟ್ಯಾಗ್ ಮೂಲಕ ಕಿತ್ತಾಡುತ್ತಿದ್ದಾರೆ. ಏನಾಗುತ್ತಿದೆ ಇಲ್ಲಿ? ಎಂದು ಪ್ರಶ್ನಿಸಿದರು.
ಟಿವಿಕೆ ಪಕ್ಷ ಎಲ್ಲಾ ಭಾಷೆಗಳನ್ನು ಗೌರವಿಸುತ್ತದೆ. ಆದರೆ ಬೇರೆ ಭಾಷೆಗೋಸ್ಕರ ಸ್ವಂತ ಗೌರವವನ್ನು ಬಿಟ್ಟುಕೊಡುವುದಿಲ್ಲ. ವೈಯಕ್ತಿಕವಾಗಿ ಯಾವ ಭಾಷೆಯನ್ನಾದರೂ ಕಲಿಯಬಹುದು. ಆದರೆ ರಾಜ್ಯ ಭಾಷೆಯನ್ನು ಬಿಟ್ಟು ಬೇರೆ ಭಾಷೆಯನ್ನು ಮುಂದಿಟ್ಟುಕೊಂಡು ಅದನ್ನು ರಾಜಕೀಯವಾಗಿ ಹೇರುವುದು ಸ್ವೀಕಾರಾರ್ಹವಲ್ಲ' ಎಂದರು.