ನವದೆಹಲಿ: ಭಯೋತ್ಪಾದಕರು ಮತ್ತು ಗ್ಯಾಂಗ್‌ಸ್ಟರ್ ನಂಟಿನ ಪ್ರಕರಣದಲ್ಲಿ ಕೆನಡಾ ಮೂಲದ ಖಾಲಿಸ್ತಾನಿ ಭಯೋತ್ಪಾದಕ ಅರ್ಷದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲಾನ ಇಬ್ಬರು ಪ್ರಮುಖ ಸಹಚರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದೆ.
ಇಲ್ಲಿನ ಪಟಿಯಾಲ ಹೌಸ್ ಕೋರ್ಟ್‌ನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಗುರುವಾರ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ, ಪರಾರಿಯಾಗಿರುವ ನೀರಜ್ ಪಂಡಿತ್ ಅಲಿಯಾಸ್ ನೀರಜ್ ಫರೀದ್‌ಪುರಿಯಾ ಹಾಗೂ ಅನಿಲ್ ಸಿಂಗ್‌ನನ್ನು ಪ್ರಕರಣದಲ್ಲಿ ಹೆಸರಿಸಲಾಗಿದೆ ಎಂದು ಎನ್‌ಐಎ ಹೇಳಿದೆ.
ಖಾಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಸದಸ್ಯನಾಗಿರುವ ಅರ್ಶ್ ದಲಾ ಭಾರತದಲ್ಲಿನ ಭಯೋತ್ಪಾದಕ-ಗ್ಯಾಂಗ್‌ಸ್ಟರ್ ಗುಂಪಿಗೆ ಹಣಕಾಸು ನೆರವು ನೀಡುತ್ತಿದ್ದ. ನೀರಜ್ ಪಂಡಿತ್ ಮತ್ತು ಅನಿಲ್ ಸಿಂಗ್ ಕೆಟಿಎಫ್‌ನ ಭಾಗವಾಗಿದ್ದರು. ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿರುವ ಇಬ್ಬರು ಆರೋಪಿಗಳು ದಲಾ ಮತ್ತು ಬಾಂಬಿಯಾ ಗುಂಪಿನ ಹಲವು ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಇವರು ಹರಿಯಾಣ ಪಲ್ವಾಲ್‌ನಲ್ಲಿ ಜಸ್ವೀರ್ ದೀಘೋಟ್ ಹತ್ಯೆಯ ಸಂಚಿನಲ್ಲಿ ಕೂಡ ಭಾಗಿಯಾಗಿದ್ದರು ಎಂದು ಅದು ಹೇಳಿದೆ.
ಕಳೆದ ವರ್ಷ ಸೆಪ್ಟೆಂಬರ್ 5 ರಂದು ಅನಿಲ್‌ನನ್ನು ಬಂಧಿಸಿದ್ದರೆ, ನೀರಜ್ ತಲೆಮರೆಸಿಕೊಂಡಿದ್ದಾನೆ.