ನವದೆಹಲಿ: ವಕೀಲರಿಗೆ 'ಹಿರಿಯ ವಕೀಲರು' ಎಂಬ ಮಾನ್ಯತೆ ನೀಡುವ ವಿಚಾರವಾಗಿ 'ಗಂಭೀರ ಆತ್ಮಾವಲೋಕನದ' ಅಗತ್ಯ ಇದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಈ ಕುರಿತಾಗಿ ವಿಸ್ತೃತ ಪೀಠವೊಂದು ವಿಚಾರಣೆ ನಡೆಸಬೇಕೇ ಎಂಬ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರನ್ನು ಕೋರಿದೆ.
ಅಭ್ಯರ್ಥಿಯ ಸಂದರ್ಶನವನ್ನು ಕೆಲವು ನಿಮಿಷಗಳ ಕಾಲ ನಡೆಸಿ, ಅವರ ಅರ್ಹತೆಯನ್ನು ನಿಜವಾಗಿಯೂ ಪರೀಕ್ಷಿಸಬಹುದೇ ಎಂಬ ಪ್ರಶ್ನೆಯನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ವಿಭಾಗೀಯ ಪೀಠವು ಎತ್ತಿದೆ.
'ಮಾನ್ಯತೆ ನೀಡುವುದಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ನ್ಯಾಯಾಲಯ ಅವಕಾಶ ನೀಡಬೇಕೇ ಎಂಬ ಪ್ರಶ್ನೆಯನ್ನು ಗಂಭೀರವಾಗಿ ಪರಿಶೀಲಿಸಬೇಕಿದೆ...' ಎಂದು ಪೀಠವು ಹೇಳಿದೆ. ವಕೀಲರ ಕಾಯ್ದೆಯ ಸೆಕ್ಷನ್ 16, ವಕೀಲರಿಗೆ 'ಹಿರಿಯ' ಎಂಬ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿದೆ.
'ವಕೀಲರೊಬ್ಬರು ವಕೀಲ ಸಮುದಾಯದಲ್ಲಿ ಹೊಂದಿರುವ ಹಿರಿಮೆ, ತಮ್ಮ ಸಾಮರ್ಥ್ಯ, ವಿಶೇಷ ಜ್ಞಾನದ ಕಾರಣಕ್ಕೆ ಹಿರಿಯ ವಕೀಲ ಎಂಬ ಮಾನ್ಯತೆಗೆ ಅರ್ಹರು ಎಂದಾದಲ್ಲಿ, ಅವರು ಸಂದರ್ಶನಕ್ಕೆ ಹಾಜರಾಗುವಂತೆ ಮಾಡುವ ಮೂಲಕ ನಾವು ಆ ವಕೀಲರ ಘನತೆಗೆ ಮುಜುಗರ ಉಂಟಾಗುವಂತೆ ಮಾಡುತ್ತಿದ್ದೇವೆಯೇ? ನಾವು ಮಾನ್ಯತೆ ನೀಡುವ ಪ್ರಕ್ರಿಯೆಯನ್ನು ಆಯ್ಕೆ ಪ್ರಕ್ರಿಯೆಯನ್ನಾಗಿ ಪರಿವರ್ತಿಸುತ್ತಿಲ್ಲವೇ' ಎಂದು ಪೀಠವು ಪ್ರಶ್ನಿಸಿದೆ.
ಹಿಂದೆ ತ್ರಿಸದಸ್ಯ ಪೀಠವೊಂದು 2017ರಲ್ಲಿ, ವಕೀಲರಿಗೆ 'ಹಿರಿಯ' ಎಂಬ ಮಾನ್ಯತೆ ನೀಡಲು ಸಿಜೆಐ ನೇತೃತ್ವದಲ್ಲಿ ಶಾಶ್ವತ ಸಮಿತಿಯೊಂದನ್ನು ರಚಿಸುವುದು ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ರೂಪಿಸಿತ್ತು.
ಹಿಂದಿನ ತೀರ್ಮಾನಗಳಿಗೆ ತಾನು ಅಗೌರವ ತೋರುತ್ತಿಲ್ಲ. ಆದರೆ, ಕೆಲವು ಕಳವಳಗಳನ್ನು ಮಾತ್ರ ದಾಖಲಿಸಲಾಗುತ್ತಿದೆ. ಇದರಿಂದಾಗಿ, ಸಿಜೆಐ ಅವರಿಗೆ ಈ ಕಳವಳ ಬಗ್ಗೆ ವಿಸ್ತೃತವಾದ ಪೀಠವು ಪರಿಶೀಲಿಸುವ ಅಗತ್ಯ ಇದೆಯೇ ಎಂಬ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ವಿಭಾಗೀಯ ಪೀಠ ಹೇಳಿದೆ.
ಹಿರಿಯ ಎಂಬ ಮಾನ್ಯತೆಗೆ ಅರ್ಹರಾದವರು ಮಾತ್ರ ಆ ಮಾನ್ಯತೆಯನ್ನು ಪಡೆಯಬೇಕು. ಅರ್ಹರಲ್ಲದವರು ಆ ಮಾನ್ಯತೆಯನ್ನು ಪಡೆದರೆ ನ್ಯಾಯಾಂಗದ ಘನತೆಯ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಪೀಠ ಹೇಳಿದೆ.