ಇಂಫಾಲ್: ಮಣಿಪುರದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಬಿಜೆಪಿ ಶಾಸಕರಾದ ಸಪಮ್ ಕೇಬಾ ಮತ್ತು ಕೆ. ಇಬೊಮ್‌ಚಾ ಮಂಗಳವಾರ ಹೇಳಿದರು.
ಬಿಜೆಪಿ ಈಶಾನ್ಯ ರಾಜ್ಯಗಳ ಉಸ್ತುವಾರಿ ಸಂಬಿತ್ ಪಾತ್ರಾ ಅವರ ಜೊತೆ ಮಾತುಕತೆ ನಡೆಸಿದ ಈ ಇಬ್ಬರು ಶಾಸಕರು, ರಾಜ್ಯದಲ್ಲಿ ಶಾಂತಿ ನೆಲಸುವಂತೆ ಮಾಡಲು ಪ್ರಯತ್ನ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ತಾವು ಮನವಿ ಮಾಡಿದ್ದುದಾಗಿ ತಿಳಿಸಿದರು.
ಹೊಸ ಮುಖ್ಯಮಂತ್ರಿ ಆಯ್ಕೆಗೆ ಕಾಲಮಿತಿ ಇದೆಯೇ ಎಂಬ ಪ್ರಶ್ನೆಗೆ ಕೇಬಾ ಅವರು, 'ಆ ಕುರಿತು ನಾವು ಚರ್ಚೆ ನಡೆಸಲಿಲ್ಲ' ಎಂದರು. 'ಎಲ್ಲವೂ ಕೇಂದ್ರದ ಕೈಯಲ್ಲಿದೆ. ನಾವು ಯಾವುದೇ ಹೇಳಿಕೆ ನೀಡಲಾಗದು. ನಾವು ಸೌಜನ್ಯದ ಭೇಟಿಗಾಗಿ ಇಲ್ಲಿದ್ದೇವೆ' ಎಂದು ಇಬೊಮ್‌ಚಾ ಹೇಳಿದರು.
ಎನ್. ಬಿರೇನ್ ಸಿಂಗ್ ಅವರು ಮಣಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪಾತ್ರಾ ಅವರು ಮಣಿಪುರದಲ್ಲೇ ಠಿಕಾಣಿ ಹೂಡಿದ್ದಾರೆ. ಪಕ್ಷದ ಹಲವು ಶಾಸಕರು, ಸಚಿವರು ಮತ್ತು ವಿಧಾನಸಭೆಯ ಸ್ಪೀಕರ್ ಜೊತೆ ಪಾತ್ರಾ ಸಭೆ ನಡೆಸಿದ್ದಾರೆ.
ಸಂಘರ್ಷಕ್ಕೆ ತುತ್ತಾಗಿರುವ ರಾಜ್ಯದಲ್ಲಿ ಶಾಂತಿ ಮತ್ತೆ ನೆಲಸುವಂತೆ ಮಾಡುವ ಬಗ್ಗೆ ಸೋಮವಾರದ ಸಭೆಗಳಲ್ಲಿ ಚರ್ಚೆಯಾಗಿದೆ. ಹೊಸ ಮುಖ್ಯಮಂತ್ರಿ ಆಯ್ಕೆಯ ಬಗ್ಗೆ ಹೆಚ್ಚು ಮಾತುಕತೆ ನಡೆದಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ.
ರಾಜ್ಯಪಾಲರ ಭೇಟಿ: ಸಂಬಿತ್ ಪಾತ್ರಾ ಅವರು ಬಿಜೆಪಿ ಮಣಿಪುರ ಘಟಕದ ಅಧ್ಯಕ್ಷೆ ಎ. ಶಾರದಾದೇವಿ ಅವರೊಂದಿಗೆ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿ ಮಾಡಿ, ಸುಮಾರು ಅರ್ಧ ಗಂಟೆ ಚರ್ಚೆ ನಡೆಸಿದರು.
ಪತ್ರಕರ್ತನ ಅಪಹರಣ ಬಿಡುಗಡೆ
ಮಣಿಪುರದ ಹಿರಿಯ ಪತ್ರಕರ್ತ ಯಾಂಬೆನ್ ಲಾಬಾ ಅವರನ್ನು ಮಂಗಳವಾರ ನಸುಕಿನಲ್ಲಿ ಅಪಹರಿಸಿದ ನಿಷೇಧಿತ ಸಂಘಟನೆಯೊಂದು ಅವರು ಕ್ಷಮೆ ಯಾಚಿಸಿದ ನಂತರ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಈ ಸಂಘಟನೆಯನ್ನು ಲಾಬಾ ಅವರು 'ಶರಣಾಗಿರುವ ಗುಂಪು' ಎಂದು ಕರೆದಿದ್ದರು. ಮಾಧ್ಯಮ ಚರ್ಚೆಯೊಂದರಲ್ಲಿ ಭಾಗಿಯಾಗಿದ್ದ ಲಾಬಾ ಅವರು ಈ ಮಾತು ಹೇಳಿದ್ದರು ಎನ್ನಲಾಗಿದೆ. ನಸುಕಿನ 3 ಗಂಟೆಯ ಸಮಯದಲ್ಲಿ ಲಾಬಾ ಮನೆ ಬಳಿಗೆ ಬಂದ ಶಸ್ತ್ರಧಾರಿಗಳ ಗುಂಪು ಅವರನ್ನು ಬಲವಂತವಾಗಿ ತಮ್ಮೊಂದಿಗೆ ಕರೆದೊಯ್ಯಿತು. ಘಟನೆ ಕುರಿತು ಲಾಬಾ ಅವರ ಕುಟುಂಬದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.