ನವದೆಹಲಿ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಕೋಮಾ ಸ್ಥಿತಿಯಲ್ಲಿರುವ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿನಿಯ ಕುಟುಂಬಕ್ಕೆ ತುರ್ತು ವೀಸಾ ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಅಮೆರಿಕಕ್ಕೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯವರಾದ ನೀಲಂ ಶಿಂದೆ ಅವರು ಫೆ.14ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ನೀಲಂ ತಲೆ, ಕೈ ಮತ್ತು ಎದೆಗೆ ತೀವ್ರ ಗಾಯಗಳಾಗಿದ್ದು ಅವರು ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ಜೀವನ್ಮರಣ ಹೋರಾಟ ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿನಿಯ ಕುಟುಂಬಕ್ಕೆ ತುರ್ತು ವೀಸಾ ನೀಡುವಂತೆ ಅಮೆರಿಕಕ್ಕೆ ಮನವಿ ಮಾಡಲಾಗಿದೆ ಎಂದು ಎಂಇಎ ಮೂಲಗಳು ತಿಳಿಸಿವೆ.
35 ವರ್ಷದ ನೀಲಂ ಕ್ಯಾಲಿಫೋರ್ನಿಯಾದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದರು.
ನೀಲಂ ಅವರನನ್ನು ನೋಡಿಕೊಳ್ಳುವ ಸಲುವಾಗಿ ಅಮೆರಿಕಕ್ಕೆ ಹೋಗಲು ತುರ್ತು ವೀಸಾ ನೀಡುವಂತೆ ಆಕೆಯ ತಂದೆ ತಾನಾಜಿ ಶಿಂದೆ ಎಂಇಎಗೆ ಮನವಿ ಮಾಡಿದ್ದರು. ಇದನ್ನು ಅಮೆರಿಕದ ಗಮನಕ್ಕೆ ತರಲಾಗಿದ್ದು, ವಿದ್ಯಾರ್ಥಿನಿಯ ಕುಟುಂಬಕ್ಕೆ ತುರ್ತು ವೀಸಾ ಒದಗಿಸಲು ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎನ್‌ಸಿಪಿ (ಶರದ್) ನಾಯಕಿ ಸುಪ್ರಿಯಾ ಸುಳೆ ಅವರು, 'ಸತಾರಾದವರಾದ ನೀಲಂ ಅವರ ತಂದೆ ತಾನಾಜಿ ಶಿಂಧೆ ಅವರು ವೈದ್ಯಕೀಯ ತುರ್ತುಸ್ಥಿತಿಯ ಕಾರಣದಿಂದಾಗಿ ತಮ್ಮ ಮಗಳನ್ನು ತುರ್ತು ಭೇಟಿ ಮಾಡಬೇಕಾಗಿದೆ. ತಾನಾಜಿ ಶಿಂಧೆ ಅವರು ತುರ್ತು ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ನೆರವಿನ ಅಗತ್ಯವಿದೆ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.