ನವದೆಹಲಿ: 2025-26ರ ಕೇಂದ್ರ ಬಜೆಟ್ ಅಭಿವೃದ್ಧಿ ಹೊಂದಿದ ದೇಶವನ್ನು ನಿರ್ಮಿಸುವ ಮೋದಿ ಸರ್ಕಾರದ ದೃಷ್ಟಿಯ ನೀಲನಕ್ಷೆಯಾಗಿದೆ ಮತ್ತು ದೇಶದ ಮಧ್ಯಮ ವರ್ಗದವರು ಯಾವಾಗಲೂ ಪ್ರಧಾನಿ ನರೇಂದ್ರ ಮೋದಿಯವರ ಹೃದಯದಲ್ಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಶನಿವಾರ) ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಇದಾಗಿದೆ.
ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅಮಿತ್ ಶಾ, 'ರೈತರಿಂದ ಮಧ್ಯಮ ವರ್ಗದವರೆಗೆ, ಆರೋಗ್ಯ, ಸ್ಟಾರ್ಟ್‌ಅಪ್‌ಗಳಿಂದ ನಾವೀನ್ಯತೆ ಮತ್ತು ಹೂಡಿಕೆಯವರೆಗಿನ ಪ್ರತಿಯೊಂದು ವಲಯವನ್ನು ಬಜೆಟ್ ಒಳಗೊಂಡಿದೆ. ಇದು ಮೋದಿಯವರ ಸ್ವಾವಲಂಬಿ ಭಾರತಕ್ಕೆ ಮಾರ್ಗಸೂಚಿಯಾಗಿದೆ' ಎಂದು ತಿಳಿಸಿದ್ದಾರೆ.
'₹12 ಲಕ್ಷ ಆದಾಯದವರೆಗೆ ಶೂನ್ಯ ಆದಾಯ ತೆರಿಗೆ ಘೋಷಿಸಲಾಗಿದೆ. ಈ ಉದ್ದೇಶಿತ ತೆರಿಗೆ ವಿನಾಯಿತಿಯು ಮಧ್ಯಮ ವರ್ಗದ ಆರ್ಥಿಕ ಯೋಗಕ್ಷೇಮವನ್ನು ಹೆಚ್ಚಿಸುವಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. ಈ ಸಂದರ್ಭದಲ್ಲಿ ಎಲ್ಲಾ ಫಲಾನುಭವಿಗಳಿಗೆ ಅಭಿನಂದನೆಗಳು. ಇದು #ViksitBharatBudget2025' ಎಂದು ಶಾ 'ಎಕ್ಸ್'ನಲ್ಲಿ ಬರೆದುಕೊಂಡಿದ್ದಾರೆ.
'ಸಮಗ್ರ ಮತ್ತು ದೂರದೃಷ್ಟಿಯ ಬಜೆಟ್‌ಗಾಗಿ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು. ಈ ಬಾರಿಯ ಬಜೆಟ್ ಪ್ರತಿ ಕ್ಷೇತ್ರದಲ್ಲೂ ಅಭಿವೃದ್ಧಿ ಹೊಂದಿದ ಮತ್ತು ಅತ್ಯುತ್ತಮ ಭಾರತವನ್ನು ನಿರ್ಮಿಸುವ ಮೋದಿ ಸರ್ಕಾರದ ದೃಷ್ಟಿಯ ನೀಲನಕ್ಷೆಯಾಗಿದೆ' ಎಂದು ವಿವರಿಸಿದ್ದಾರೆ.