ನವದೆಹಲಿ: ಲೋಕಸಭೆ ಅಧಿವೇಶನದ ಕಲಾಪಗಳನ್ನು ಮಾರ್ಚ್ 10ರವರೆಗೆ ಮುಂದೂಡಲಾಯಿತು. ಬಜೆಟ್ ಅಧಿವೇಶನದ ಮೊದಲ ಹಂತದ ಕಲಾಪ ಶೇ 112ರಷ್ಟು ಫಲಪ್ರದವಾಗಿದೆ.
ಸದನದ ಕಾರ್ಯಕಲಾಪಗಳನ್ನು ಮಾರ್ಚ್ 10ರ ಬೆಳಿಗ್ಗೆ 11 ಗಂಟೆವರೆಗೆ ಮುಂದೂಡಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಘೋಷಿಸಿದರು.ಈ ಅವಧಿಯಲ್ಲಿ ಕಲಾಪ ಶೇ 112ರಷ್ಟು ಫಲಪ್ರದವಾಗಿದೆ ಎಂದು ಅವರು ತಿಳಿಸಿದರು.
ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ 17 ಗಂಟೆ 23 ನಿಮಿಷ ಚರ್ಚೆ ನಡೆದಿದೆ. 173 ಸಂಸದರು ಮಾತನಾಡಿದ್ದಾರೆ. ಬಜೆಟ್ ಮೇಲೆ 170 ಸದಸ್ಯರು ಮಾತನಾಡಿದ್ದು, 16 ಗಂಟೆ 13 ನಿಮಿಷ ಚರ್ಚೆ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಗುಜರಾತ್‌ನ ಉದ್ಯಮಿಯೊಬ್ಬರಿಗೆ ಯೋಜನೆ ವಹಿಸುವ ಸಂಬಂಧ ವಿರೋಧ ಪಕ್ಷಗಳು ಪ್ರತಿಭಟಿಸಿದ್ದರಿಂದ ಕಲಾಪವನ್ನು ಮಧ್ಯಾಹ್ನ 2 ಗಂಟೆ ವರೆಗೆ ಮುಂದೂಡಲಾಗಿತ್ತು.
2 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ಅದಾಯ ತೆರಿಗೆ ಮಸೂದೆ ಮಂಡಿಸಿ, ಅದನ್ನು ಸಂಸದೀಯ ಸಮಿತಿಗೆ ವಹಿಸುವಂತೆ ಭಿನ್ನವಿಸಿಕೊಂಡರು.
ಬಜೆಟ್ ಅಧಿವೇಶನದ ಎರಡನೇ ಅವಧಿಯು ಮಾರ್ಚ್ 10ರಿಂದ ಪ್ರಾರಂಭವಾಗಿ ಏಪ್ರಿಲ್ 4ರ ವರೆಗೆ ನಡೆಯಲಿದೆ.