ಅಹಮದಾಬಾದ್: ಮಹಾಕುಂಭಮೇಳ ಆಯೋಜನೆಗೊಂಡಿದ್ದ ಪ್ರಯಾಗ್‌ರಾಜ್‌ನ ಸಂಗಮದಲ್ಲಿ ಸ್ನಾನ ಮಾಡುವ ಮಹಿಳೆಯರ ವಿಡಿಯೊಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲದ ಸುದ್ದಿ ಹೊರಬಿದ್ದ ಸಂದರ್ಭದಲ್ಲೇ ಗುಜರಾತ್‌ನ ಹೆರಿಗೆ ಆಸ್ಪತ್ರೆಗಳಲ್ಲಿ ಮಹಿಳೆಯರ ಖಾಸಗಿ ವಿಡಿಯೊಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ತಂಡವನ್ನು ಸೈಬರ್ ಅಪರಾಧ ವಿಭಾಗದ ಪೊಲೀಸರು ಭೇದಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮಹಿಳೆಯರ ಸಿಸಿಟಿವಿ ದೃಶ್ಯಾವಳಿಯನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಗುಜರಾತ್‌ನ ಪೊಲೀಸರು ಒಟ್ಟು ಏಳು ಜನರನ್ನು ಬಂಧಿಸಿದ್ದಾರೆ.
ಈ ಕುರಿತು ಬುಧವಾರ ಮಾಹಿತಿ ನೀಡಿರುವ ಸೈಬರ್ ಅಪರಾಧ ವಿಭಾಗದ ಪೊಲೀಸರು, 'ದೆಹಲಿ ಮೂಲದ ರೋಹಿತ್ ಸಿಸಿಡಿಯಾನನ್ನು ಬುಧವಾರ ಬಂಧಿಸಲಾಗಿದ್ದು, ಬಂಧಿತರ ಒಟ್ಟು ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಚಿಕಿತ್ಸೆಗೆ ಬರುತ್ತಿದ್ದ ಮಹಿಳೆಯರ ಸಿಸಿಟಿವಿ ದೃಶ್ಯವಾಳಿ ಪಡೆಯುತ್ತಿದ್ದ ಇವರು, ಅದರ ಕ್ಯೂಆರ್ ಕೋಡ್ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು. ಇವುಗಳನ್ನು ಪಡೆದವರು, ಅದನ್ನು ಯುಟ್ಯೂಬ್ ಹಾಗೂ ಟೆಲಿಗ್ರಾಂ ಚಾನಲ್‌ಗಳಲ್ಲಿ ಹರಿಯಬಿಡುತ್ತಿದ್ದರು' ಎಂದಿದ್ದಾರೆ.
'ರಾಜ್‌ಕೋಟ್‌ನ ಆಸ್ಪತ್ರೆಯ ಹೆರಿಗೆ ಕೊಠಡಿಯಲ್ಲಿ ವೈದ್ಯರು ಮಹಿಳೆಯರ ತಪಾಸಣೆ ನಡೆಸುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ಕುರಿತು ಫೆ. 17ರಂದು ಪ್ರಕರಣ ದಾಖಲಾಗಿತ್ತು. ಇದನ್ನು ಬೆನ್ನು ಹತ್ತಿದ ಪೊಲೀಸರು 'ಪ್ರಜ್ವಲ್ ಟೈಲಿ' ಎಂಬ ಯುಟ್ಯೂಬ್ ಚಾನಲ್ ಹೊಂದಿದ್ದ ಸೂರತ್‌ನ ಪರಿತ್ ದಮೇಲಿಯಾ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಹ್ಯಾಕರ್ ಆಗಿದ್ದ ಈತ ಮಹಾರಾಷ್ಟ್ರದ ಲಾತೂರ್ ಮೂಲದವನು. ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿರುವ ಈತ, ರಾಜ್‌ಕೋಟ್‌ನಲ್ಲಿರುವ ಹೆರಿಗೆ ಆಸ್ಪತ್ರೆಗಳಲ್ಲಿನ ಸಿಸಿಟಿವಿ ದೃಶ್ಯವಾಳಿಗಳನ್ನು ಕದ್ದು, ಅದನ್ನು ಸಿಸೋಡಿಯಾಗೆ ಮಾರುತ್ತಿದ್ದ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ಪಡೆದ ವಿಡಿಯೊಗಳ ಕ್ಯೂಆರ್ ಕೋಡ್ ಸಿದ್ಧಪಡಿಸಿ ಅದನ್ನು ಟೈಲಿ ಹಾಗೂ ಇತರರಿಗೆ ಸಿಸೋಡಿಯಾ ಮಾರಾಟ ಮಾಡಿದ್ದ. ಇಂಥ ವಿಡಿಯೊಗಳು ಮೂರು ಯುಟ್ಯೂಬ್ ಚಾನಲ್‌ಗಳಲ್ಲಿ ಪ್ರಸಾರವಾಗಿವೆ. ಇದರ ಲಿಂಕ್ ಟೆಲಿಗ್ರಾಂ ಚಾನಲ್‌ನಲ್ಲೂ ಹಂಚಿಕೆಯಾಗಿದೆ. ಇಂಥ ಒಂದು ವಿಡಿಯೊ ವೀಕ್ಷಿಸಿಲಿಚ್ಛಿಸುವವರಿಂದ ಈ ತಂಡ ₹2 ಸಾವಿರ ಶುಲ್ಕ ಪಡೆಯುತ್ತಿತ್ತು' ಎಂದಿದ್ದಾರೆ.
'ಆಸ್ಪತ್ರೆ, ಕಚೇರಿ, ಶಾಲಾ ಕಾಲೇಜುಗಳು ಸೇರಿ ಒಟ್ಟು 50 ಸಾವಿರದಷ್ಟು ಇಂಥ ಸಿಸಿಟಿವಿ ದೃಶ್ಯಗಳನ್ನು ಈ ತಂಡ ಸಂಗ್ರಹಿಸಿತ್ತು. ಇನ್ನೂ ಕೆಲ ಪ್ರಕರಣಗಳಲ್ಲಿ ಕೆಲ ವ್ಯಕ್ತಿಗಳ ಮನೆಯ ಬೆಡ್‌ರೂಂಗಳಲ್ಲೂ ಈ ತಂಡ ರಹಸ್ಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿತ್ತು. ಬಂಧಿತ ಎಲ್ಲಾ ಏಳು ಜನರ ವಿರುದ್ಧ ಸೈಬರ್ ಭಯೋತ್ಪಾದನೆ ಮತ್ತು ಇತರರ ಲೈಂಗಿಕ ಕ್ರಿಯೆ ವೀಕ್ಷಿಸುವ ವಿಲಕ್ಷಣ ಕೃತ್ಯದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಸೈಬರ್ ಅಪರಾಧ ವಿಭಾಗದ ಡಿಸಿಪಿ ಲವಿನಾ ಸಿನ್ಹಾ ತಿಳಿಸಿದ್ದಾರೆ.