ಕೋಲ್ಕತ್ತ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳವು 'ಮೃತ್ಯುಕುಂಭ'ವಾಗಿ ಮಾರ್ಪಟ್ಟಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಜನವರಿ 29ರಂದು ಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತ ಕುರಿತು ವಿಧಾನಸಭೆಯಲ್ಲಿ ಮಾತನಾಡಿರುವ ಅವರು, 'ಇದು 'ಮೃತ್ಯುಕುಂಭ'..
ನಾನು ಮಹಾಕುಂಭವನ್ನು ಗೌರವಿಸುತ್ತೇನೆ. ಹಾಗೆಯೇ ಪವಿತ್ರ ಗಂಗಾ ಮಾತೆಯನ್ನು ಆರಾಧಿಸುತ್ತೇನೆ. ಆದರೆ, ಈ ಬಾರಿ ಕುಂಭಮೇಳದಲ್ಲಿ ನಡೆದ ಕಾಲ್ತುಳಿತ ದುರಂತವನ್ನು ಮರೆಯುವುದಿಲ್ಲ. ಘಟನೆಯಲ್ಲಿ ಗಾಯಗೊಂಡಿದ್ದವರ ಪೈಕಿ ಎಷ್ಟು ಜನ ಚೇತರಿಸಿಕೊಂಡಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಶ್ರೀಮಂತರಿಗೆ, ವಿಐಪಿಗಳಿಗೆ ₹1 ಲಕ್ಷದವರೆಗೆ ಕ್ಯಾಂಪ್ (ಟೆಂಟ್) ಪಡೆಯಲು ವ್ಯವಸ್ಥೆ ಇದೆ. ಆದರೆ, ಬಡವರಿಗೆ ಕುಂಭದಲ್ಲಿ ಯಾವುದೇ ವ್ಯವಸ್ಥೆಗಳನ್ನು ಮಾಡಿಲ್ಲ' ಎಂದು ಬಿಜೆಪಿ ವಿರುದ್ಧ ಟೀಕಿಸಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ನನ್ನನ್ನು ಎದುರಿಸಲು ಪರದಾಡುತ್ತಾರೆ. ಅದಕ್ಕಾಗಿಯೇ ಅವರು (ಬಿಜೆಪಿಗರು) ನಾನು ಮಾತನಾಡುವಾಗ ಸದನವನ್ನು ಬಹಿಷ್ಕರಿಸುತ್ತಾರೆ' ಎಂದು ಮಮತಾ ಲೇವಡಿ ಮಾಡಿದ್ದಾರೆ.
ಟಿಎಂಸಿ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂಬ ಸುವೇಂದು ಅಧಿಕಾರಿ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಮಮತಾ, 'ವಾಕ್ ಸ್ವಾತಂತ್ರ್ಯ ಇದೆ ಎಂದ ಮಾತ್ರಕ್ಕೆ ಬಿಜೆಪಿ ಶಾಸಕರಿಗೆ ದ್ವೇಷವನ್ನು ಹರಡಲು ಮತ್ತು ಜನರನ್ನು ವಿಭಜಿಸಲು ಅವಕಾಶ ನೀಡುವುದಿಲ್ಲ' ಎಂದಿದ್ದಾರೆ.
ಬಂಗಾಳ ವಿಧಾನಸಭೆಯಲ್ಲಿ ಮಾತನಾಡಲು ಅವಕಾಶವಿಲ್ಲ ಎಂದು ಬಿಜೆಪಿ ಶಾಸಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಮತಾ ಗುಡುಗಿದ್ದಾರೆ.
'ನಾನು ರಾಷ್ಟ್ರೀಯ ಭದ್ರತೆ ಅಥವಾ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವುದಿಲ್ಲ. ಆದರೆ, ಅಮೆರಿಕದಿಂದ ಗಡೀಪಾರು ಮಾಡಿದ ಭಾರತೀಯರ ಕಾಲುಗಳಿಗೆ ಸರಪಳಿ ಹಾಗೂ ಕೈಗಳಿಗೆ ಕೋಳ ಹಾಕಿದ್ದು ಮಾತ್ರ ಅಮಾನವೀಯ ಮತ್ತು ನಾಚಿಕೆಗೇಡಿನ ಸಂಗತಿ' ಎಂದು ಮಮತಾ ಹೇಳಿದ್ದಾರೆ.
ಅಮೆರಿಕದಿಂದ ವಲಸಿಗರನ್ನು ಕರೆತರಲು ಕೇಂದ್ರ ಸರ್ಕಾರವೇ ವಿಮಾನಗಳನ್ನು ಕಳುಹಿಸಿಕೊಡಬೇಕು ಎಂದು ಮಮತಾ ಆಗ್ರಹಿಸಿದ್ದಾರೆ.