ನವದೆಹಲಿ: ದೆಹಲಿ ವಿಧಾನಸಭೆಗೆ ಬುಧವಾರ ನಡೆದ ಮತದಾನ ಅಂತ್ಯಗೊಳ್ಳುತ್ತಿದ್ದಂತೆಯೇ ವಿವಿಧ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರಕಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.
ಆದರೆ ಮತಗಟ್ಟೆ ಸಮೀಕ್ಷೆಗಳನ್ನು ಆಡಳಿತಾರೂಢ ಆಮ್ ಆದ್ಮಿ ಪಕ್ಷವು (ಎಎಪಿ) ತಿರಸ್ಕರಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ 'ಹ್ಯಾಟ್ರಿಕ್' ಗೆಲುವು ದಾಖಲಿಸುವ ವಿಶ್ವಾಸ ವ್ಯಕ್ತಪಡಿಸಿದೆ.
ಮತ್ತೊಂದೆಡೆ ಚುನಾವಣೋತ್ತರ ಸಮೀಕ್ಷೆಗಳು ಬದಲಾವಣೆಯ ಸೂಚನೆಯಾಗಿದೆ ಎಂದು ಬಿಜೆಪಿ ಸ್ವಾಗತಿಸಿದೆ.
70 ವಿಧಾನಸಭೆಯ ದೆಹಲಿ ವಿಧಾನಸಭೆಗೆ ಇಂದು ಮತದಾನ ಮುಕ್ತಾಯಗೊಂಡಿದ್ದು, ಫೆ.8ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.
ಪಿಟಿಐಗೆ ಪ್ರತಿಕ್ರಿಯೆ ನೀಡಿರುವ ಎಎಪಿಯ ರಾಷ್ಟ್ರೀಯ ವಕ್ತಾರೆ ರೀನಾ ಗುಪ್ತಾ, 'ಮತಗಟ್ಟೆ ಸಮೀಕ್ಷೆಗಳು ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಪಕ್ಷದ ಐತಿಹಾಸಿಕ ಸಾಧನೆಯನ್ನು ಕಡಿಮೆ ಅಂದಾಜು ಮಾಡಿದೆ. ಈ ಹಿಂದೆಯೂ ಪಕ್ಷವು ಮತಗಟ್ಟೆ ಸಮೀಕ್ಷೆಗಿಂತಲೂ ಉತ್ತಮ ಸಾಧನೆ ಮಾಡಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.
'2013, 2015 ಅಥವಾ 2020 ಯಾವುದೇ ಮತಗಟ್ಟೆ ಸಮೀಕ್ಷೆಗಳನ್ನು ತೆಗೆದು ನೋಡಿ, ಎಎಪಿ ಯಾವಾಗಲೂ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿಯಲಾಗಿತ್ತು. ಆದರೆ ವಾಸ್ತವವಾಗಿ ಹೆಚ್ಚಿನ ಸಂಖ್ಯೆಗಳನ್ನು ಗಳಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.
'ದೆಹಲಿಯ ಜನತೆ ಎಎಪಿಗೆ ದೊಡ್ಡ ಸಂಖ್ಯೆಯಲ್ಲಿ ಮತ ಹಾಕಿದ್ದು, ರಾಜಧಾನಿಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಲಿದೆ. ಅಲ್ಲದೆ ಕೇಜ್ರಿವಾಲ್ ಸತತ 4ನೇ ಸಲ ಮುಖ್ಯಮಂತ್ರಿ ಆಗಲಿದ್ದಾರೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಮತಗಟ್ಟೆ ಸಮೀಕ್ಷೆಗಳನ್ನು ಸ್ವಾಗತಿಸಿರುವ ದೆಹಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ, 'ದೆಹಲಿಯ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಎದುರು ನೋಡುತ್ತಿದ್ದಾರೆ. ಎಎಪಿ ನಡೆಸಿರುವ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಡಲಿದೆ. 25 ವರ್ಷಗಳ ಬಳಿಕ ಕೇಸರಿ ಪಕ್ಷವು ಸರ್ಕಾರವನ್ನು ರಚಿಸಲಿದೆ' ಎಂದು ಹೇಳಿದ್ದಾರೆ.