ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲದ ನಡುವೆ ಬಿಜೆಪಿಯ ಆಂತರಿಕ ವಲಯದಲ್ಲಿ ಚರ್ಚೆಗಳು ವೇಗ ಪಡೆದುಕೊಂಡಿವೆ. ಏತನ್ಮಧ್ಯೆ, ಆಮ್ ಆದ್ಮಿ ಪಕ್ಷದ (ಎಎಪಿ) ಆಡಳಿತವಿರುವ ಪಂಜಾಬ್ ಹಾಗೂ ಎನ್‌ಡಿಎ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವ ಬಿಹಾರದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಳನ್ನು ಕಣ್ಣಿಟ್ಟು ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಬಿಜೆಪಿ ನೇಮಕ ಮಾಡುವ ಸಾಧ್ಯತೆ ಇದೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಶಾಸಕರ ಒಂದು ಗುಂಪು, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಮಂಗಳವಾರ ಭೇಟಿ ಮಾಡಿದೆ. ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ವಾಪಸ್ ಆದ ನಂತರವೇ ಹೊಸ ಸರ್ಕಾರ ರಚನೆಯಾಗಲಿದೆ. ಆದರೂ, ಎರಡೂವರೆ ದಶಕಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಮರಳುತ್ತಿರುವುದರಿಂದ ವಿವಿಧ ಸ್ಥಾನಗಳಿಗೆ ಅಳೆದು ತೂಗಿ ಅಭ್ಯರ್ಥಿಗಳನ್ನು ಆರಿಸುವ ಕಾರ್ಯವನ್ನು ಕೇಸರಿ ಪಕ್ಷ ಆರಂಭಿಸಿದೆ.
ದೆಹಲಿಯು ಕೇಂದ್ರಾಡಳಿತ ಪ್ರದೇಶವೇ ಆಗಿದ್ದರೂ, ಇಲ್ಲಿನ ರಾಜಕೀಯ ಬೆಳವಣಿಗೆಗಳು ದೇಶದ ಗಮನ ಸೆಳೆಯುತ್ತವೆ. ಹಾಗಾಗಿ, ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಿಸುವುದರಿಂದ ಬಿಜೆಪಿಗೆ ವೈವಿಧ್ಯತೆಯನ್ನು ತಂದುಕೊಡಲಿದೆ.
ಪಂಜಾಬ್, ಬಿಹಾರದ ಮೇಲೆ ಕಣ್ಣು
ಬಿಜೆಪಿ, ಮತ್ತದರ ಮಾತೃ ಸಂಸ್ಥೆ ಆರ್‌ಎಸ್‌ಎಸ್ ಪಾಲಿಗೆ, ಪಂಜಾಬ್ ಹಿಂದಿನಿಂದಲೂ ಕಠಿಣವಾಗಿದೆ. ಸದ್ಯ, ಎಎಪಿಯ ಭಗವಂತ ಮಾನ್ ಅವರು ಸ್ಪಷ್ಟ ಬಹುಮತದೊಂದಿಗೆ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್, ಪ್ರಮುಖ ವಿರೋಧ ಪಕ್ಷವಾಗಿದೆ.
ರೈತರ ಪ್ರತಿಭಟನೆ ಎದುರಿಸುತ್ತಿರುವ ಹಾಗೂ ಅಕಾಲಿ ದಳದೊಂದಿಗೆ ಸಂಬಂಧ ಕಡಿದುಕೊಂಡಿರುವ ಬಿಜೆಪಿಗೆ ಪಂಜಾಬ್‌ನಲ್ಲಿ ಪ್ರಮುಖ ಕ್ಷೇತ್ರವಾಗಲೀ, ಮಿತ್ರ ಪಕ್ಷವಾಗಲೀ ಇಲ್ಲ.
ಹೀಗಾಗಿ, ರಜೌರಿ ಗಾರ್ಡನ್ ಕ್ಷೇತ್ರದ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ದೆಹಲಿಯಲ್ಲಿ ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಬಿಜೆಪಿ ಸೇರುವ ಮುನ್ನ ಅಕಾಲಿ ದಳದ ಪ್ರಮುಖ ನಾಯಕರಾಗಿದ್ದ ಸಿರ್ಸಾ, ದೆಹಲಿ ಗುರುದ್ವಾರ ಪ್ರಬಂಧಕ್ ಸಮಿಯ ಮುಖ್ಯಸ್ಥರೂ ಹೌದು. ಅವರು ಡಿಸಿಎಂ ಆದರೆ, ಪಂಜಾಬ್‌ನಲ್ಲಿ ನೆರವಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದು. 2027ರ ಆರಂಭದಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿದೆ.
ಬಿಜೆಪಿಗೆ ತೊಡಕಾಗಿರುವ ಮತ್ತೊಂದು ರಾಜ್ಯ ಬಿಹಾರದ ವಿಧಾನಸಭಾ ಚುನಾವಣೆಯು ಇದೇ ವರ್ಷ ಡಿಸೆಂಬರ್‌ನಲ್ಲಿ ನಡೆಯಲಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಮತ್ತೊಬ್ಬರು ಡಿಸಿಎಂ ನೇಮಿಸಲು ಬಿಜೆಪಿ ಮುಂದಾಗಬಹುದು.
ನಿತೀಶ್ ಕುಮಾರ್ ಅವರ ಜೆಡಿ(ಯು) ಜೊತೆಗೂಡಿ ಬಿಹಾರದಲ್ಲಿ ಹಲವು ಬಾರಿ ಅಧಿಕಾರ ಅನುಭವಿಸಿದ್ದರೂ, ಬಿಜೆಪಿಯ ಯಾರಿಗೂ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿಲ್ಲ.
'ಜಾಟ್' ಸೆಳೆಯಲು ಯತ್ನ
ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಜಾಟ್ ಸಮುದಾಯದ ಪ್ರಾಬಲ್ಯವಿರುವ ಪ್ರದೇಶಗಳೊಂದಿಗೆ ರಾಷ್ಟ್ರ ರಾಜಧಾನಿಯು ಗಡಿ ಹಂಚಿಕೊಂಡಿದೆ.
ಉತ್ತರ ಪ್ರದೇಶದಲ್ಲಿ 2024ರ ಲೋಕಸಭೆ ಚುನಾವಣೆ ವೇಳೆ ಜಾಟ್ ಸಮುದಾಯದ ಹಲವು ನಾಯಕರು ಸೋಲು ಕಂಡಿದ್ದಾರೆ. ಅಂತೆಯೇ, ಹರಿಯಾಣದಲ್ಲಿ ಈ ಹಿಂದೆ ಇದ್ದ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ವಿರುದ್ಧ ಜಾಟ್ ಸಮುದಾಯೇತರರ ಮತಗಳನ್ನು ಒಟ್ಟುಗೂಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಹೀಗಾಗಿ, ನೆರೆಯ ರಾಜ್ಯಗಳಲ್ಲಿ ತನ್ನ ರಾಜಕೀಯ ಸ್ಥಾನಮಾನಗಳನ್ನು ಸರಿದೂಗಿಸಿಕೊಳ್ಳಲು ಕೇಸರಿ ಪಕ್ಷ ಉದ್ದೇಶಿಸಿದೆ.
ನವದೆಹಲಿ ಕ್ಷೇತ್ರದಲ್ಲಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ಗೆ ಸೋಲುಣಿಸಿದ ಪರ್ವೇಶ್ ವರ್ಮಾ ಅವರು ಜಾಟ್ ಸಮುದಾಯದ ಪ್ರಮುಖ ನಾಯಕ. ಅವರು, ಮುಖ್ಯಮಂತ್ರಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಒಂದು ವೇಳೆ ಸಿಎಂ ಸ್ಥಾನ ತಪ್ಪಿದರೆ, ಡಿಸಿಎಂ ಪಟ್ಟ ದಕ್ಕಬಹುದು. ಆ ಮೂಲಕ ಪಕ್ಕದ ರಾಜ್ಯಗಳಲ್ಲಿಯೂ ಜಾಟ್ ಸಮುದಾಯವನ್ನು ಸೆಳೆಯಲು ಪ್ರಯತ್ನಿಸಬಹುದು.
ಈ ಎಲ್ಲದರ ನಡುವೆ, ಮಹಿಳೆಯೊಬ್ಬರಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಸದ್ಯ ದೇಶದಲ್ಲಿರುವ ಬಿಜೆಪಿಯ 14 ಮುಖ್ಯಮಂತ್ರಿಗಳ ಪೈಕಿ ಒಬ್ಬರೂ ಮಹಿಳೆ ಇಲ್ಲ. ಅದನ್ನು ಸರಿದೂಗಿಸಿಕೊಳ್ಳುವ ಪ್ರಯತ್ನ ನಡೆಯಬಹುದು.