ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆದಿದ್ದು, ಶನಿವಾರ ಮತ ಎಣಿಕೆ ಮೂಲಕ ಫಲಿತಾಂಶ ಹೊರಬೀಳಲಿದೆ. ಬಹು ನಿರೀಕ್ಷೆಯ ಈ ಚುನಾವಣೆಯಲ್ಲಿ 16 ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, 8 ಸಂಸ್ಥೆಗಳು ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿವೆ.
ಮತ್ತೊಂದು ಬಾರಿ ಅವಕಾಶ ಸಿಗುವ ಉತ್ಸಾಹದಲ್ಲಿರುವ ಆಮ್ ಆದ್ಮಿ ಪಾರ್ಟಿ (ಎಎಪಿ) ಗೆಲುವು ಸಾಧಿಸಲಿದೆ ಎಂದು ನಾಲ್ಕು ಸಮೀಕ್ಷೆಗಳು ಹೇಳಿವೆ. ಇದೀಗ ಮತ್ತೆ ಮೂರು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶವನ್ನು ಹಂಚಿಕೊಂಡಿದ್ದು, ಈ ಬಾರಿ ಜಯ ಬಿಜಿಪಿಯದ್ದೇ ಎಂದಿವೆ.
ಸಿಎನ್‌ಎಕ್ಸ್, ಎಕ್ಸಿಸ್ ಮೈ ಇಂಡಿಯಾ ಹಾಗೂ ಟುಡೇಸ್ ಚಾಣಕ್ಯ ಸಂಸ್ಥೆಗಳ ಸಮೀಕ್ಷೆಯಲ್ಲಿ 70 ಕ್ಷೇತ್ರಗಳ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 45ರಿಂದ 61 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಅಂದಾಜಿಸಿವೆ.
ಸಿಎನ್‌ಎಕ್ಸ್ ಸಮೀಕ್ಷೆ
ಬಿಜೆಪಿ: 49-61
ಎಎಪಿ: 10-19
ಕಾಂಗ್ರೆಸ್: 0-1
***
ಎಕ್ಸಿಸ್ ಮೈ ಇಂಡಿಯಾ
ಬಿಜೆಪಿ: 49-61
ಎಎಪಿ: 10-19
ಕಾಂಗ್ರೆಸ್: 0-1
***
ಟುಡೇಸ್ ಚಾಣಕ್ಯ
ಬಿಜೆಪಿ: 51 (+/- 6)
ಎಎಪಿ: 19 (+/- 6)
ಕಾಂಗ್ರೆಸ್: 0 (+/- 3)
ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಪರಿಗಣಿಸಿದರೆ ಚುನಾವಣೋತ್ತರ ಸಮೀಕ್ಷೆಗಳು ಬದಲಾದ ನಿದರ್ಶನಗಳೂ ಇವೆ. 300ಕ್ಕೂ ಹೆಚ್ಚು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದೇ ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಅಂತಿಮವಾಗಿ 240 ಕ್ಷೇತ್ರಗಳನ್ನಷ್ಟೇ ಕೇಸರಿ ಪಕ್ಷಕ್ಕೆ ಗೆಲ್ಲಲು ಸಾಧ್ಯವಾಗಿತ್ತು. ಮಿತ್ರಪಕ್ಷಗಳ ನೆರವಿನೊಂದಿಗೆ 293 ಸೀಟುಗಳ ಬಹುಮತದೊಂದಿಗೆ ಸರ್ಕಾರ ರಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಬಕಾರಿ ನೀತಿ ಹಗರಣ, ಮುಖ್ಯಮಂತ್ರಿ ಬಂಗಲೆ ನವೀಕರಣ, ಯಮುನಾ ನದಿ ಶುದ್ಧೀಕರಣಕ್ಕೆ ನಿರಾಸಕ್ತಿ ಹಾಗೂ ಮಾಲಿನ್ಯ ನಿಯಂತ್ರಣದಲ್ಲಿ ವೈಫಲ್ಯ ಸೇರಿದಂತೆ 2013ರಿಂದ ಆಡಳಿತದಲ್ಲಿರುವ ಎಎಪಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದು ಬಿಜೆಪಿ ನಿರಂತರ ವಾಗ್ದಾಳಿ ಮತ್ತು ಹೋರಾಟ ನಡೆಸಿತ್ತು. ಆ ಮೂಲಕ 1998ರ ನಂತರ ಮತ್ತೆ ಅಧಿಕಾರಕ್ಕೇರುವ ಅವಕಾಶವನ್ನು ಕೇಸರಿ ಪಕ್ಷ ನಿರೀಕ್ಷಿಸುತ್ತಿದೆ.
ವಿರೋಧ ಪಕ್ಷಗಳ ಇಂಡಿಯಾ ಬಣದಲ್ಲಿದ್ದ ಎಎಪಿ ಮತ್ತು ಕಾಂಗ್ರೆಸ್ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ವಿರೋಧಿಗಳಾದವು. ಆ ಮೂಲಕ ಹತ್ತು ವರ್ಷಗಳ ಹಿಂದೆ ಕಳೆದುಕೊಂಡ ಗದ್ದುಗೆಯನ್ನು ಪಡೆಯುವ ಕಸರತ್ತನ್ನು ಕಾಂಗ್ರೆಸ್ ನಡೆಸಿದೆ.
ಹೀಗಾಗಿ ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ನಾಳೆ (ಫೆ. 8) ಮತ ಎಣಿಕೆ ನಡೆಯಲಿದ್ದು, ಮತದಾರರು ಯಾರಿಗೆ ಬಹುಮತ ನೀಡಿದ್ದಾರೆ ಎಂಬುದಕ್ಕೆ ತೆರೆ ಬೀಳಲಿದೆ.