ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶೇ 80 ರಷ್ಟು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಿದ್ದ 699 ಅಭ್ಯರ್ಥಿಗಳ ಪೈಕಿ 555 (ಶೇ 79.39) ಅಭ್ಯರ್ಥಿಗಳ ಠೇವಣಿ ಹಣವನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಂಡಿದೆ.
ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ ಎಎಪಿ, ಬಿಜಿಪಿ, ಜನತಾದ ದಳ (ಯುನೈಟೆಡ್) ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ಪಕ್ಷದ ಎಲ್ಲಾ ಅಭ್ಯರ್ಥಿಗಳು ಅಗತ್ಯ ಮತಗಳನ್ನು ಪಡೆದು ಠೇವಣಿ ಹಣವನ್ನು ಉಳಿಸಿಕೊಂಡಿದ್ದಾರೆ.
ಇವರೊಂದಿಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಐಎಂಐಎಂನ ಅಭ್ಯರ್ಥಿ ಶಿಫಾ ಉರ್ ರೆಹಮಾನ್ ಅವರು ಕೂಡ ಠೇವಣಿಯನ್ನು ಉಳಿಸಿಕೊಂಡಿದ್ದಾರೆ.
ಆದರೆ, ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ 70 ಅಭ್ಯರ್ಥಿಗಳ ಪೈಕಿ 67 ಅಭ್ಯರ್ಥಿಗಳು ಸೋಲು ಕಂಡು ಠೇವಣಿ ಹಣವನ್ನು ಕಳೆದುಕೊಂಡಿದ್ದಾರೆ. ಈ ಮೂಲಕ 2013 ರವರೆಗೆ ದೆಹಲಿಯನ್ನು ಆಳಿದ್ದ ಕಾಂಗ್ರೆಸ್ ಪಕ್ಷದ ಮತ್ತೆ ಅಧಿಕಾರಕ್ಕೆ ಬರುವ ಕನಸು ಭಗ್ನವಾಗಿದೆ.
ಕಾಂಗ್ರೆಸ್‌ನಿಂದ ಕಸ್ತೂರ್‌ಬಾ ನಗರ ಕ್ಷೇತ್ರದ ಅಭಿಶೇಕ್ ದತ್, ನನ್ನ್ಗೋಲ್ ಜತ್ ಕ್ಷೇತ್ರದ ರೋಹಿತ್ ಚೌದರಿ ಮತ್ತು ಬದ್ಲಿ ಕ್ಷೇತ್ರದಿಂದ ದೇವೇಂದ್ರ ಯಾದವ್ ಅಗತ್ಯ ಮತ ಪಡೆದು ಠೇವಣಿ ಹಣವನ್ನು ಉಳಿಸಿಕೊಂಡಿದ್ದಾರೆ.
1951ರ ಜನತಾ ಪ್ರಾತಿನಿಧ್ಯ ಕಾಯಿದೆ ಪ್ರಕಾರ, ಸಾಮಾನ್ಯ ವಿಭಾಗದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಚುನಾವಣಾ ಆಯೋಗಕ್ಕೆ ₹10 ಸಾವಿರ ಠೇವಣಿ ಹಾಗೂ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದ ಅಭ್ಯರ್ಥಿಗಳು ಸ್ಪರ್ಧಿಸಲು ₹ 5 ಸಾವಿರ ಠೇವಣಿ ಇಡಬೇಕು.
ಒಂದು ವೇಳೆ ಅಭ್ಯರ್ಥಿ ಚುನಾವಣೆಯಲ್ಲಿ ಅಗತ್ಯ ಮತಗಳನ್ನು ಅಂದರೆ ಒಟ್ಟು ಮತಗಳ ಆರನೇ ಒಂದು ಭಾಗ ಪಡೆಯದೇ ಇದ್ದರೆ ಅಥವಾ ಸೋಲನುಭವಿಸಿದರೆ ಚುನಾವಣಾ ಆಯೋಗ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಿದೆ.