ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿರುವ ವಿದ್ಯುನ್ಮಾನ ಮತ ಯಂತ್ರಗಳು (ಇವಿಎಂ) ಹಾಗೂ ಮತದಾನ ದೃಢೀಕರಣ ಯಂತ್ರಗಳನ್ನು (ವಿವಿಪ್ಯಾಟ್) ಮೂರು ಸುತ್ತಿನ ಭದ್ರತೆ ಒದಗಿಸಲಾಗಿರುವ 70 ಸ್ಟ್ರಾಂಗ್ ರೂಂಗಳಲ್ಲಿ ಇರಿಸಲಾಗಿದೆ. ದೆಹಲಿಯ ಮುಖ್ಯ ಚುಣಾವಣಾಧಿಕಾರಿ ಆರ್. ಅಲೈಸ್ ವಾಜ್ ಅವರು ಈ ಬಗ್ಗೆ ಗುರುವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ರಾಷ್ಟ್ರ ರಾಜಧಾನಿಯ ನಾಗರಿಕರು ಬುಧವಾರ (ಫೆ.5ರಂದು) ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಣದಲ್ಲಿರುವ 699 ಅಭ್ಯರ್ಥಿಗಳ ಭವಿಷ್ಯ ಶನಿವಾರ (ಫೆ.8ರಂದು) ಪ್ರಕಟವಾಗಲಿದೆ.
'ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಒಂದೊಂದು ಸ್ಟ್ರಾಂಗ್ ರೂಂ ವ್ಯವಸ್ಥೆ ಮಾಡಲಗಿದೆ. ಚುನಾವಣಾ ಆಯೋಗದ ನಿಯಮಾವಳಿಗಳಿಗೆ ಅನುಸಾರವಾಗಿ ಕಟ್ಟುನಿಟ್ಟಿನ ಭದ್ರತೆ ವ್ಯವಸ್ಥೆ ಮಾಡಲಾಗಿದೆ' ಎಂದು ವಾಜ್ ತಿಳಿಸಿದ್ದಾರೆ.
'ಸ್ಟ್ರಾಂಗ್ ರೂಂಗಳ ಬಳಿ ಮೂರು ಸುತ್ತಿನ ಭದ್ರತೆ ಒದಗಿಸಲಾಗಿದೆ. ಒಳ ಆವರಣದಲ್ಲಿ ಕೇಂದ್ರೀಯ ಸಶಸ್ತ್ರ ಅರೆಸೇನಾ ಪಡೆ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಹೊರ ಆವರಣದಲ್ಲಿ, ರಾಜ್ಯ ಸಶಸ್ತ್ರ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ' ಎಂದು ಹೇಳಿಕೆ ನೀಡಿದ್ದಾರೆ.
'24x7 ಸಿಸಿಟಿವಿ ಕಣ್ಗಾವಲು ಇದೆ. ಮುಚ್ಚಿದ ಬಾಗಿಲುಗಳು, ಹೆಚ್ಚುವರಿ ಭದ್ರತೆಗಾಗಿ ಮಾಡಿರುವ ಡಬಲ್-ಲಾಕ್ ಮತ್ತು ಕಾರಿಡಾರ್‌ಗಳ ದೃಶ್ಯಗಳು ನಿರಂತರವಾಗಿ ಸೆರೆಯಾಗಲಿವೆ' ಎಂದು ಅವರು ಮಾಹಿತಿ ನೀಡಿದ್ದಾರೆ.