ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಅನ್ವಯ ಭಾರತೀಯ ಪೌರತ್ವ ಪಡೆದಿರುವ ಹಲವು ಮಂದಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.
ದೆಹಲಿಯ ಮಜ್ನು ಕಾ ತಿಲಾದ ಮತಗಟ್ಟೆಯಲ್ಲಿ ರೇಷ್ಮಾ ಎಂಬ ಪಾಕಿಸ್ತಾನದ ಹಿಂದೂ ನಿರಾಶ್ರಿತೆ ಮೊದಲ ಬಾರಿಗೆ ಹೆಮ್ಮೆಯಿಂದ ಮತದಾನ ಮಾಡಿದ್ದಾರೆ.
ಇವರು ಪೌರತ್ವ ಕಾಯ್ದೆ ಅನ್ವಯ ಭಾರತದ ಪೌರತ್ವ ಪಡೆದಿದ್ಧಾರೆ.
'ನಾನು 17 ವರ್ಷಗಳಿಂದ ದೆಹಲಿಯಲ್ಲಿ ವಾಸವಿದ್ದೇನೆ. ಈಗ ಮೊದಲ ಬಾರಿಗೆ ನಾನು ಹಿಂದೂಸ್ಥಾನದ ಭಾಗವಾಗಿದ್ದೇನೆ ಎನಿಸುತ್ತಿದೆ' ಎಂದು ಭಾವೋದ್ವೇಗಕ್ಕೆ ಒಳಗಾದ ರೇಷ್ಮಾ ಹೇಳಿದ್ದಾರೆ.
ದೀರ್ಘಾವಧಿಯ ಸಂಘರ್ಷದ ಬಳಿಕ ಮುಂದೆ ನನ್ನ ಮಕ್ಕಳಿಗೆ ಉತ್ತಮ ಭವಿಷ್ಯ ಸಿಗಲಿದೆ ಎಂಬ ಭರವಸೆ ಮೂಡಿದೆ ಎಂದು ಅವರು ಹೇಳಿದ್ದಾರೆ.
ಪೌರತ್ವ ಪಡೆದ 186 ಮಂದಿ ಪಾಕಿಸ್ತಾನದ ಹಿಂದೂ ನಿರಾಶ್ರಿತರಲ್ಲಿ ಒಬ್ಬರಾದ 50 ವರ್ಷದ ರೇಷ್ಮಾ, ಹಲವು ವರ್ಷಗಳ ಅನಿಶ್ಚಿತತೆಯ ನಂತರ, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
ಸಾವಿರಾರು ಪಾಕಿಸ್ತಾನಿ ಹಿಂದೂಗಳು ಧಾರ್ಮಿಕ ಕಿರುಕುಳದಿಂದ ಪಲಾಯನಗೈದು ಭಾರತದಲ್ಲಿ ಹಲವು ದಶಕಗಳಿಂದ ಆಶ್ರಯ ಪಡೆದಿದ್ದಾರೆ. ಅನೇಕರು ದೆಹಲಿಯ ಮಜ್ನು ಕಾ ತಿಲಾದಲ್ಲಿ ನೆಲೆಸಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಶೆಡ್‌ಗಳಲ್ಲಿ ಜೀವನ ನಡೆಸುತ್ತಿದ್ದಾರೆ.
ಇನ್ನುಮುಂದೆ, ನಮ್ಮ ಸಂಕಷ್ಟಗಳು ಕಡಿಮೆಯಾಗಲಿವೆ ಎಂದು ಪಾಕಿಸ್ತಾನಿ ಹಿಂದೂ ನಿರಾಶ್ರಿತರ ಸಮುದಾಯದ ಅಧ್ಯಕ್ಷ ಧರಂವೀರ್ ಸೋಲಂಕಿ ಭರವಸೆ ವ್ಯಕ್ತಪಡಿಸಿದ್ದಾರೆ.
'ಈಗ ನಾವು ಆಗಾಗ್ಗೆ ನಮ್ಮ ಸ್ಥಳಗಳನ್ನು ಬದಲಿಸುವ ಅಗತ್ಯವಿಲ್ಲ. ನಾವೀಗ ಶಾಶ್ವತ ಮನೆ ಮತ್ತು ಜೀವನೋಪಾಯ ಕಂಡುಕೊಳ್ಳಬಹುದು'ಎಂದಿದ್ದಾರೆ.
ನಮ್ಮ ಸಮುದಾಯದ ಜನರು ಅತ್ಯುತ್ಸಾಹದಿಂದ ಸರತಿ ಸಾಲಿನಲ್ಲಿ ನಿಂತು ಮತ ಹಾಕಿದ್ದಾರೆ ಎಂದು ಸೋಲಂಕಿ ಹೇಳಿದ್ದಾರೆ.
27 ವರ್ಷದ ಯಶೋದಾ ತಮ್ಮ ಸಮುದಾಯದಲ್ಲಿ ಭಾರತೀಯ ಪೌರತ್ವವನ್ನು ಪಡೆದ ಮೊದಲಿಗರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಅವಕಾಶವನ್ನು ಸಹ ಪಡೆದಿದ್ದರು. ಇಂದು ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಅವರು ಅತ್ಯಂತ ಉತ್ಸಾಹದಲ್ಲಿದ್ದರು.
'ನಾವು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಹಲವು ವರ್ಷಗಳನ್ನು ಕಳೆದಿದ್ದೇವೆ, ಬದುಕಲು ಹೆಣಗಾಡುತ್ತಿದ್ದೇವೆ. ಈಗ ನಾವು ಭಾರತೀಯ ಪೌರತ್ವವನ್ನು ಹೊಂದಿದ್ದೇವೆ, ನಾವು ಸೂಕ್ತ ಉದ್ಯೋಗ, ಮನೆ ಮತ್ತು ಘನತೆಯ ಜೀವನವನ್ನು ಆಶಿಸುತ್ತೇವೆ'ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಮಾರ್ಚ್ 11 ರಂದು ಕೇಂದ್ರ ಸರ್ಕಾರವು 2019ರ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನವನ್ನು ಘೋಷಿಸಿತ್ತು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ 2014ರ ಡಿಸೆಂಬರ್ 31ಕ್ಕಿಂತ ಮೊದಲು ಬಂದಿರುವ ದಾಖಲೆರಹಿತ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ಪಡೆಯಲು ಈ ಕಾಯ್ದೆ ದಾರಿ ಮಾಡಿಕೊಟ್ಟಿತು.