ಮುಂಬೈ: ಜನವರಿ 29ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಾಗುತ್ತಿರುವ ಮಹಾಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತ ಮತ್ತು ದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ (ಫೆ.15) ಸಂಭವಿಸಿದ ಕಾಲ್ತುಳಿತ ದುರಂತಗಳಲ್ಲಿ 7,000ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಆರೋಪಿಸಿದ್ದಾರೆ.
ನಮ್ಮ ಮೂಲಗಳ ಮಾಹಿತಿಯ ಪ್ರಕಾರ ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಕನಿಷ್ಠ 120ರಿಂದ 150 ಜನರು ಮೃತಪಟ್ಟಿದ್ದಾರೆ. ಆದರೆ, 100ಕ್ಕೂ ಹೆಚ್ಚು ಜನರ ಸಾವಿನ ಸಂಖ್ಯೆಯನ್ನು ಬಿಜೆಪಿ ಸರ್ಕಾರ ಮರೆಮಾಚುತ್ತಿದೆ ಎಂದು ರಾವುತ್ ಕಿಡಿಕಾರಿದ್ದಾರೆ.
'ಮಹಾಕುಂಭದಲ್ಲಿ ಪಾಲ್ಗೊಳ್ಳಲು ಬಿಜೆಪಿ ಜನರನ್ನು ಆಹ್ವಾನಿಸುತ್ತಿರುವ ರೀತಿಯನ್ನು ನೋಡಿದರೆ ಅದು ಬಿಜೆಪಿ ಪಕ್ಷದ ಕಾರ್ಯಕ್ರಮದಂತೆ ಭಾಸವಾಗುತ್ತದೆ. ಒಮ್ಮೆ ನೀವು ಅಲ್ಲಿಗೆ ಹೋದರೆ ವಾಹನಗಳ ಪಾರ್ಕಿಂಗ್, ಆಹಾರ, ವಸತಿ ಸೌಲಭ್ಯ ಯಾವುದು ಸರಿಯಾದ ರೀತಿ ಇಲ್ಲ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
'ಕುಂಭಮೇಳಕ್ಕೆ ಇದುವರೆಗೆ 50 ಕೋಟಿಗೂ ಹೆಚ್ಚು ಜನರು ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಆದರೆ, ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರು ಎಷ್ಟು?, ಕುಂಭಮೇಳದಲ್ಲಿ ನಾಪತ್ತೆಯಾಗಿರುವ 7,000 ಜನರು ಎಲ್ಲಿಗೆ ಹೋಗಿದ್ದಾರೆ' ಎಂದು ರಾವುತ್ ಪ್ರಶ್ನಿಸಿದ್ದಾರೆ.
ಮಹಾಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಅವರು ಉಲ್ಲೇಖಿಸಿದ್ದಾರೆ.