ವಾಷಿಂಗ್ಟನ್: ಟ್ರಂಪ್ ಆಡಳಿತದಲ್ಲಿ ಬಿಲಿಯನೇರ್ ಎಲಾನ್ ಮಸ್ಕ್ ಅವರ ಪಾತ್ರವು ಶ್ವೇತಭವನದ ಉದ್ಯೋಗಿ ಮತ್ತು ಅಧ್ಯಕ್ಷರ ಹಿರಿಯ ಸಲಹೆಗಾರ. ಅವರು ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆ (ಡಿಒಜಿಇ)ಯ ಉದ್ಯೋಗಿಯಲ್ಲ. ಹಾಗಾಗಿ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿಲ್ಲ ಎಂದು ಶ್ವೇತಭವನ ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.
ಶ್ವೇತಭವನದ ಇತರ ಹಿರಿಯ ಸಲಹೆಗಾರರಂತೆ ಮಸ್ಕ್ ಅವರು ಅಧ್ಯಕ್ಷರಿಗೆ ಸಲಹೆ ಮತ್ತು ನಿರ್ದೇಶನಗಳನ್ನು ನೀಡಬಹುದು. ಆದರೆ ಅವರಿಗೆ ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವ ಯಾವುದೇ ಅಧಿಕಾರವಿಲ್ಲ ಎಂದು ಶ್ವೇತಭವನದ ಆಡಳಿತ ಕಚೇರಿಯ ನಿರ್ದೇಶಕ ಜೋಶುವಾ ಫಿಶರ್ ಅವರು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2ನೇ ಅವಧಿಗೆ ಅಮೆರಿಕದ ಚುಕ್ಕಾಣಿ ಹಿಡಿದ ಡೊನಾಲ್ಡ್ ಟ್ರಂಪ್, ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸಿದ್ದ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಮತ್ತು ಭಾರತೀಯ ಮೂಲದ ಅಮೆರಿಕ ಉದ್ಯಮಿ ವಿವೇಕ್ ರಾಮಸ್ವಾಮಿ ಅವರನ್ನು ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆ(ಡಿಒಜಿಇ)ಯ ಉಸ್ತುವಾರಿಯಾಗಿ ನೇಮಿಸಿದ್ದರು.
ಆಡಳಿತ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಅನಗತ್ಯ ವೆಚ್ಚಗಳನ್ನು ಕಡಿತ ಮಾಡುವುದು ಈ ಇಲಾಖೆಯ ಉದ್ದೇಶ.