ಹೈದರಾಬಾದ್: ಬದಲಾದ ಸನ್ನಿವೇಶ ಮತ್ತು ಬದಲಾಗುತ್ತಿರುವ ತಂತ್ರಜ್ಞಾನಗಳ ಆಧಾರದ ಮೇಲೆ ಪೊಲೀಸ್ ಇಲಾಖೆ ಕೂಡ ಬದಲಾಗುತ್ತಿದ್ದು ರಾಕ್ಷಸೀ ಡ್ರೋನ್ ಗಳ ಹತ್ತಿಕ್ಕಲು ಇದೀಗ 'ಗರುಡಾ ಪಡೆ' ಸೇರ್ಪಡೆಯಾಗಿದೆ.
ಹೌದು.. ತೆಲಂಗಾಣ ಪೊಲೀಸ್ ಇಲಾಖೆಗೆ ಇದೀಗ Eagle Squad ಸೇರ್ಪಡೆಯಾಗಿದ್ದು, ಇತ್ತೀಚೆಗೆ ಪೊಲೀಸರು ಹದ್ದುಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ಯಶಸ್ವಿಯಾಗಿದೆ. ಇತ್ತೀಚಿನ ಪ್ರದರ್ಶನದಲ್ಲಿ ಹದ್ದುಗಳ ಪಡೆಯು ಡ್ರೋನ್‌ಗಳನ್ನು ಪ್ರತಿಬಂಧಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಈ ತರಬೇತಿ ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ತೆಲಂಗಾಣ ಪೊಲೀಸ್ ಉನ್ನತ ಅಧಿಕಾರಿಗಳ ಮುಂದೆ ವೃತ್ತಿಪರರಿಂದ ತರಬೇತಿ ಪಡೆದ ಮೂರು ಹದ್ದುಗಳು ತಮ್ಮ ಪ್ರದರ್ಶನ ನೀಡಿದವು. ಈ ವೇಳೆ ಸಿಬ್ಬಂದಿ ಹಾರಿಸಿದ ಡ್ರೋನ್ ಗಳನ್ನು ದೂರದಲ್ಲಿ ಕುಳಿತಿದ್ದ ಹದ್ದುಗಳು ಕ್ಷಣಮಾತ್ರದಲ್ಲಿ ಅವುಗಳನ್ನು ಹಿಡಿದು ಕ್ಯಾಂಪ್ ಗೆ ತಂದು ಬಿಟ್ಟವು.
ಈ ಬಗ್ಗೆ ಮಾಹಿತಿ ನೀಡಿರುವ ತೆಲಂಗಾಣ ಪೊಲೀಸರು ಈ ಉಪಕ್ರಮವು ವಿವಿಐಪಿ ಭೇಟಿಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಸಮಯದಲ್ಲಿ ಭದ್ರತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ಘಟಕವನ್ನು ತೆಲಂಗಾಣ ಪೊಲೀಸರು ಮುನ್ನಡೆಸುತ್ತಿದ್ದಾರೆ. ಹದ್ದುಗಳ ದಳವನ್ನು ಸಕ್ರಿಯ ಸೇವೆಗೆ ಸಂಯೋಜಿಸಲು ಯೋಜನೆಗಳು ನಡೆಯುತ್ತಿವೆ, ಡ್ರೋನ್ ಬೆದರಿಕೆಯನ್ನು ಎದುರಿಸಲು ತೆಲಂಗಾಣ ಪೊಲೀಸರೊಳಗೆ ವಿಶೇಷ ಈಗಲ್‌ಸ್ಕ್ವಾಡ್ ಘಟಕವನ್ನು ಸ್ಥಾಪಿಸಲಾಗಿದೆ.