ಅಹಮದಾಬಾದ್: ಅಮೆರಿಕದ ಪ್ರಧಾನ ತನಿಖಾ ಸಂಸ್ಥೆಯಾದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಮುಖ್ಯಸ್ಥರಾಗಿ ಕಾಶ್ ಪಟೇಲ್ ಅವರ ನೇಮಕವನ್ನು ಅಮೆರಿಕ ಸಂಸತ್ ದೃಢಪಡಿಸಿದ್ದು, ಭಾರತೀಯ-ಅಮೆರಿಕನ್ ಕಾಶ್ ಪಟೇಲ್, ಗುಜರಾತ್‌ನ ಆನಂದ್ ಜಿಲ್ಲೆಯ ಭದ್ರನ್ ಗ್ರಾಮದ ಮೂಲವನ್ನು ಹೊಂದಿದ್ದಾರೆ.
ಅವರ ಕುಟುಂಬವು 70ರಿಂದ 80 ವರ್ಷಗಳ ಹಿಂದೆ ಉಗಾಂಡಾಕ್ಕೆ ವಲಸೆ ಹೋಗಿದೆ ಎಂದು ಅವರ ಸಮುದಾಯದ ಸದಸ್ಯರು ಶುಕ್ರವಾರ ತಿಳಿಸಿದ್ದಾರೆ. ಪಾಟಿದಾರ್ ಸಮುದಾಯಕ್ಕೆ ಸೇರಿದ ನ್ಯೂಯಾರ್ಕ್ ಮೂಲದ ಪಟೇಲ್ (44) ಅಮೆರಿಕದ ಪ್ರಧಾನ ಕಾನೂನು ಜಾರಿ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಮೊದಲ ಭಾರತೀಯ-ಅಮೆರಿಕನ್ ಆಗಿದ್ದಾರೆ.
ಪಟೇಲ್ ಅವರ ಕುಟುಂಬದ ಎಲ್ಲ ಸದಸ್ಯರು ವಿದೇಶದಲ್ಲಿ ನೆಲೆಸಿದ್ದಾರೆ. ಆಫ್ರಿಕಾಕ್ಕೆ ಸ್ಥಳಾಂತರಗೊಂಡ ನಂತರ ಭದ್ರನ್‌ನಲ್ಲಿದ್ದ ತಮ್ಮ ಪೂರ್ವಜರ ಭೂಮಿ, ಮನೆಗಳನ್ನು ಮಾರಾಟ ಮಾಡಿದ್ದಾರೆ. ಆನಂದ್ ಜಿಲ್ಲೆಯ ಪಾಟಿದಾರ್ ಸಮುದಾಯದ ಸಂಘಟನೆಯಾದ 'ಛ್ ಗಮ್ ಪಾಟಿದಾರ್ ಮಂಡಲ್'ಸಮುದಾಯದ ಎಲ್ಲ ಸದಸ್ಯರ 'ವಂಶವೃಕ್ಷ' ವನ್ನು ನಿರ್ವಹಿಸುತ್ತದೆ.
ಸಂಘಟನೆ ನಿರ್ವಹಿಸಿರುವ 'ವಂಶವೃಕ್ಷ'ದಲ್ಲಿ ನಾವು ಕಾಶ್ ಪಟೇಲ್ ಅವರ ತಂದೆ ಪ್ರಮೋದ್ ಪಟೇಲ್ ಮತ್ತು ಅವರ ಸಹೋದರರು ಹಾಗೂ ಅಜ್ಜನ ಹೆಸರುಗಳನ್ನು ಹೊಂದಿದ್ದೇವೆ ಎಂದು ಸಂಘಟನೆಯ ಕಾರ್ಯದರ್ಶಿ ಮತ್ತು ಆನಂದ್ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜೇಶ್ ಪಟೇಲ್ ಹೇಳಿದ್ದಾರೆ.
ವಂಶವೃಕ್ಷಕ್ಕೆ ಕಾಶ್ ಪಟೇಲ್ ಹೆಸರನ್ನು ಇನ್ನಷ್ಟೇ ಸೇರಿಸಬೇಕಿದೆ ಎಂದು ರಾಜೇಶ್ ಪಟೇಲ್ ಪಿಟಿಐಗೆ ತಿಳಿಸಿದ್ದಾರೆ. ವಂಶವೃಕ್ಷದಲ್ಲಿ ಅವರ ಕುಟುಂಬದ 18 ಪೀಳಿಗೆಯ ಮಾಹಿತಿ ಇದೆ ಎಂದು ಅವರು ಹೇಳಿದ್ದಾರೆ.
ನಮ್ಮಲ್ಲಿರುವ ಮಾಹಿತಿ ಪ್ರಕಾರ, ಭದ್ರನ್ ಹಳ್ಳಿಯಲ್ಲಿ ವಾಸವಿದ್ದ ಕಾಶ್ ಪಟೇಲ್ ಕುಟುಂಬ 70-80 ವರ್ಷಗಳ ಹಿಂದೆ ಉಗಾಂಡಕ್ಕೆ ವಲಸೆ ಹೋಗಿದೆ. ಪೂರ್ವಜರ ಮನೆ ಮತ್ತು ಭೂಮಿಯನ್ನು ಮಾರಾಟ ಮಾಡಿದ್ದಾರೆ. ಸಂಬಂಧಿಕರೆಲ್ಲ ವಿದೇಶಗಳಲ್ಲಿ, ಅದರಲ್ಲೂ ಅಮೆರಿಕದಲ್ಲಿ ನೆಲೆಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಾಶ್ ಪಟೇಲ್ ಭಾರತಕ್ಕೆ ಬಂದಾಗ ಅವರ ಅನುಮತಿ ಪಡೆದು ಅವರ ವಂಶವೃಕ್ಷ ಮುಂದುವರಿಸುತ್ತೇವೆ ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಶ್ ಪಟೇಲ್ ಕುಟುಂಬದ ಯಾರೋಬ್ಬರೂ ಗುಜರಾತ್‌ಗೆ ಭೇಟಿ ನೀಡಿಲ್ಲ.