ವಾಷಿಂಗ್ಟನ್: ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐನ 9ನೇ ನಿರ್ದೇಶಕರಾಗಿ ನೇಮಕಗೊಂಡಿರುವ ಭಾರತೀಯ ಮೂಲದ ಕಾಶ್ ಪಟೇಲ್ ಅವರು ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಶ್ವೇತಭವನದ ಆವರಣದಲ್ಲಿರುವ ಐಸೆನ್‌ಹೋವರ್ ಎಕ್ಸಿಕ್ಯೂಟಿವ್ ಕಚೇರಿ ಕಟ್ಟಡದ (ಇಇಒಬಿ) ಇಂಡಿಯನ್ ಟ್ರೀಟಿ ರೂಮ್‌ನಲ್ಲಿ ನಡೆದ ಸಮಾರಂಭದಲ್ಲಿ ಅಮೆರಿಕದ ಅಟಾರ್ನಿ ಜನರಲ್ ಪ್ಯಾಮ್ ಬಾಂಡಿ ಅವರು ಶುಕ್ರವಾರ ಪ್ರಮಾಣ ವಚನ ಬೋಧಿಸಿದರು.
ನಂತರ ಮಾತನಾಡಿದ 44 ವರ್ಷದ ಪಟೇಲ್, 'ಅಮೆರಿಕ ಕನಸು ಈಗ ಸಾಕಾರಗೊಂಡಿದೆ. ಅಮೆರಿಕ ಕನಸು ಸತ್ತಿದೆ ಎಂದು ಯಾರಾದರೂ ಭಾವಿಸಿದ್ದರೆ, ನನ್ನತ್ತ ನೋಡಿ. ಕಾನೂನು ಜಾರಿ ಇಲಾಖೆಯನ್ನು ಮುನ್ನಡೆಸಲಿರುವ ಮೊದಲ ತಲೆಮಾರಿನ ಭಾರತೀಯ ಮಗುವನ್ನು ನೀವು ನೋಡುತ್ತಿದ್ದೀರಿ. ಇದು ಬೇರೆಲ್ಲಿಯೂ ಸಂಭವಿಸಲು ಸಾಧ್ಯವಿಲ್ಲ. ದೇವರು ಸೃಷ್ಟಿಸಿರುವ ಈ ಸುಂದರ ಜಗತ್ತಿನ ಶ್ರೇಷ್ಠ ರಾಷ್ಟ್ರವೊಂದರಲ್ಲಿ ಸಾಧ್ಯವಾಗಿದೆ' ಎಂದು ಹೇಳಿದರು.
ಗುರುವಾರವಷ್ಟೇ ಪಟೇಲ್ ಅವರ ನೇಮಕವನ್ನು ಅನುಮೋದಿಸಿ ಅಮೆರಿಕ ಸಂಸತ್ತಿನಲ್ಲಿ 51 ಸಂಸದರ ಪೈಕಿ 49 ಸಂಸದರು ಮತಚಲಾಯಿಸಿದ್ದರು.
ತಮ್ಮ ಮೇಲೆ ನಂಬಿಕೆಯಿರಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ನೇಮಕವನ್ನು ದೃಢಪಡಿಸಿದ ಸೆನೆಟರ್‌ಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಚಾರ್ಲ್ಸ್ ಕ್ವಿಂಟನ್ ಬ್ರೌನ್
ಸೇನೆಯ ಉನ್ನತ ಹುದ್ದೆಯಿಂದ ಬ್ರೌನ್ ವಜಾ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಯುಪಡೆಯ ಜನರಲ್ ಚಾರ್ಲ್ಸ್ ಕ್ವಿಂಟನ್ ಬ್ರೌನ್ ಜೂನಿಯರ್ ಅವರನ್ನು ಸೇನೆಯ ಉನ್ನತ ಅಧಿಕಾರಿಗಳ ತಂಡದ (ಜೆಸಿಎಸ್) ಮುಖ್ಯಸ್ಥನ ಸ್ಥಾನದಿಂದ ಶುಕ್ರವಾರ ದಿಢೀರ್ ಆಗಿ ವಜಾಗೊಳಿಸಿದ್ದಾರೆ. ಜೆಸಿಎಸ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಎರಡನೇ ಕಪ್ಪುವರ್ಣೀಯ ಎನಿಸಿಕೊಂಡಿದ್ದ ಬ್ರೌನ್ ಅವರ 16 ತಿಂಗಳ ಅಧಿಕಾರಾವಧಿ ಉಕ್ರೇನ್‌ನಲ್ಲಿನ ಯುದ್ಧ ಮತ್ತು ಪಶ್ಚಿಮ ಏಷ್ಯಾದಲ್ಲಿನ ಸುದೀರ್ಘ ಸಂಘರ್ಷದ ನಡುವೆ ಕಳೆದು ಹೋಯಿತು. ವಾಯುಪಡೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಡೇನಿಯಲ್ ಕೇನ್ ಅವರನ್ನು ಮುಂದಿನ ಮುಖ್ಯಸ್ಥರನ್ನಾಗಿ ನಾಮನಿರ್ದೇಶನ ಮಾಡುವುದಾಗಿ ಟ್ರಂಪ್ ಹೇಳಿದ್ದಾರೆ.
ಕೇನ್ ಅವರು ತಮ್ಮ ವೃತ್ತಿಜೀವನದಲ್ಲಿ ಎಫ್- 16 ಯುದ್ಧ ವಿಮಾನದ ಪೈಲಟ್ ಆಗಿದ್ದರು. ಅಲ್ಲದೆ ಸಿಐಎನಲ್ಲಿ ಸೇನಾ ವ್ಯವಹಾರಗಳ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದಲ್ಲದೆ ನೌಕಾಪಡೆಯ ಕಾರ್ಯಾಚರಣೆಗಳ ಮುಖ್ಯಸ್ಥರಾದ ಅಡ್ಮಿರಲ್ ಲಿಸಾ ಫ್ರಾಂಚೆಟ್ಟಿ ಮತ್ತು ವಾಯುಪಡೆಯ ಉಪ ಮುಖ್ಯಸ್ಥ ಜನರಲ್ ಜಿಮ್ ಸ್ಲೈಫ್ ಅವರನ್ನೂ ಟ್ರಂಪ್ ವಜಾಗೊಳಿಸಿದ್ದಾರೆ.