ನವದೆಹಲಿ: ವಿದೇಶಿ ನೇರ ಬಂಡವಾಳ ನಿಯಮಾವಳಿಯನ್ನು ಉಲ್ಲಂಘಿಸಿದ ಆರೋಪದಡಿ ಬಿಬಿಸಿ ವರ್ಲ್ಡ್ ಸರ್ವೀಸ್ ಇಂಡಿಯಾ ಸುದ್ದಿ ಸಂಸ್ಥೆಗೆ ಜಾರಿ ನಿರ್ದೇಶನಾಲಯವು (ED) ₹3.44 ಕೋಟಿ ದಂಡ ವಿಧಿಸಿದೆ.
ಇದೇ ಪ್ರಕರಣದಲ್ಲಿ ಬ್ರಿಟಿಷ್ ಬ್ರಾಡ್‌ಕಾಸ್ಟರ್ ಸಂಸ್ಥೆಯ ಮೂವರು ನಿರ್ದೇಶಕರಿಗೆ ₹1.14 ಕೋಟಿ ದಂಡವನ್ನು ಜಾರಿ ನಿರ್ದೇಶನಾಲಯ ವಿಧಿಸಿದೆ.
ಕಾನೂನು ಉಲ್ಲಂಘನೆ ಆರೋಪದಡಿ ಬಿಬಿಸಿಗೆ 2023ರ ಆ. 4ರಂದು ಸಂಸ್ಥೆಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು.
ಬಿಬಿಸಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಿರುವ ಸಂಸ್ಥೆಯಾಗಿದ್ದು ಡಿಜಿಟಲ್ ಮಾಧ್ಯಮದ ಮೂಲಕ ಸುದ್ದಿಗಳನ್ನು ಬಿತ್ತರಿಸುತ್ತಿದೆ. ಆದರೆ 2019ರ ಸೆ. 18ರಂದು ಹೊರಡಿಸಿದ ಸುತ್ತೋಲೆಯಂತೆ ಭಾರತದಲ್ಲಿ ಡಿಜಿಟಲ್ ಮಾಧ್ಯಮದಲ್ಲಿ ವಿದೇಶಿ ನೇರ ಬಂಡವಾಳವನ್ನು ಶೇ 27ಕ್ಕೆ ಇಳಿಸುವ ನಿಯಮವನ್ನು ಪಾಲಿಸಿರಲಿಲ್ಲ. ಇದರಡಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತ್ತು ಎಂದು ಮೂಲಗಳು ಹೇಳಿವೆ.
ಇದಕ್ಕಾಗಿ ಬಿಬಿಸಿ ವರ್ಲ್ಡ್ ಸರ್ವೀಸ್ ಇಂಡಿಯಾಗೆ ₹3,44,48,850 ದಂಡವನ್ನು ವಿಧಿಸಲಾಗಿದೆ. ಜತೆಗೆ 2021ರ ಅ. 15ರಿಂದ ನಿತ್ಯ ₹5 ಸಾವಿರದಂತೆ ಇಂದಿನವರೆಗೂ ಹೆಚ್ಚುವರಿ ದಂಡ ವಿಧಿಸಲಾಗಿದೆ. ಇದರ ಜತೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಗಿಲ್ಸ್ ಆಯಂಟನಿ, ಇಂದು ಶೇಖರ್ ಸಿನ್ಹಾ ಮತ್ತು ಪೌಲ್ ಮಿಷೆಲ್ ಗಿಬ್ಸನ್ ಅವರಿಗೆ ₹1,14,82,950 ದಂಡವನ್ನು ಜಾರಿ ನಿರ್ದೇಶನಾಲಯ ವಿಧಿಸಿದೆ ಎಂದು ಮೂಲಗಳು ಹೇಳಿವೆ.