ಅಲಿಗಢ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಸರ್ ಶಾ ಸುಲೈಮಾನ್ ಹಾಲ್‌ನಲ್ಲಿ 'ಊಟಕ್ಕೆ ದನದ ಮಾಂಸದ (ಬೀಫ್) ಬಿರಿಯಾನಿ ಲಭ್ಯವಿದೆ' ಎಂಬುದಾಗಿ ಸೂಚನಾಪತ್ರ ಅಂಟಿಸಿದ್ದ ಪ್ರಕರಣ ಸಂಬಂಧ, ಪೊಲೀಸರು ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಮೊಹಮ್ಮದ್ ಫಯಾಜುಲ್ಲಾ, ಮುಜಾಸ್ಸಿಮ್ ಅಹ್ಮದ್ ಹಾಗೂ ಸುಲೈಮಾನ್ ಹಾಲ್‌ನ ಪ್ರಧಾನ ಅಧಿಕಾರಿ ಎಫ್.ಆರ್.ಗೌಹರ್ ವಿರುದ್ಧ ಸಿವಿಲ್ ಲೈನ್ಸ್ ಠಾಣೆಯಲ್ಲಿ ಸೋಮವಾರ ಎಫ್‌ಐಆರ್ ದಾಖಲಾಗಿದೆ.
'ಅಲಿಗಢ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ದನದ ಮಾಂಸದ ಬಿರಿಯಾನಿ ಪಾರ್ಟಿ ಮಾಡಿದ್ದಾರೆ ಎಂದು ಆರೋಪಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ಣಿ ಸೇನೆಯು ಮನವಿ ಮಾಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಕೈಗೊಳ್ಳಲಾಗಿದೆ' ಎಂದು ಸರ್ಕಲ್ ಆಫೀಸರ್ ಅಭಯ್ ಪಾಂಡೆ ತಿಳಿಸಿದ್ದಾರೆ.