ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಕಾಯ್ದೆ, ಸುಂಕ ನಿಯಮಗಳಿಗೆ ನಿರೀಕ್ಷಣಾ ಜಾಮೀನು ನಿಬಂಧನೆ ಅನ್ವಯಿಸುತ್ತದೆ ಮತ್ತು ಎಫ್‌ಐಆರ್ ದಾಖಲಿಸದಿದ್ದರೂ ಕೂಡ ವ್ಯಕ್ತಿಗಳು ಬಂಧನ ಪೂರ್ವ ಜಾಮೀನಿಗಾಗಿ ನ್ಯಾಯಾಲಯಗಳ ಮೊರೆ ಹೋಗಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.
ಕಸ್ಟಮ್ಸ್ ಕಾಯ್ದೆ, ಜಿಎಸ್‌ಟಿ ಕಾಯ್ದೆಗಳಲ್ಲಿನ ದಂಡ ವಿಧಿಸುವ ನಿಬಂಧನೆಗಳು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಸಿಆರ್‌ಪಿಸಿ ಮತ್ತು ಸಂವಿಧಾನಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಕಳೆದ ವರ್ಷ ಮೇ 16ರಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ಪೀಠವು ಕಾಯ್ದಿರಿಸಿತ್ತು.
ಇಂದು ತೀರ್ಪು ಪ್ರಕಟಿಸಿದ ಸಿಜೆಐ, ನಿರೀಕ್ಷಣಾ ಜಾಮೀನಿನಂತಹ ವಿಷಯಗಳ ಕುರಿತು ಸಿಆರ್‌ಪಿಸಿ ಮತ್ತು ನಂತರದ ಕಾನೂನು, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ನ ನಿಬಂಧನೆಗಳು ಕಸ್ಟಮ್ಸ್ ಮತ್ತು ಜಿಎಸ್‌ಟಿ ಕಾಯ್ದೆಗಳ ಅಡಿಯಲ್ಲಿ ವ್ಯಕ್ತಿಗಳಿಗೆ ಅನ್ವಯಿಸುತ್ತವೆ ಎಂದು ಹೇಳಿದರು.
ಜಿಎಸ್‌ಟಿ ಮತ್ತು ಕಸ್ಟಮ್ಸ್ ಕಾಯ್ದೆಗಳ ಅಡಿಯಲ್ಲಿ ಬಂಧನಕ್ಕೆ ಒಳಗಾಗಬಹುದಾದ ವ್ಯಕ್ತಿಗಳು ಎಫ್‌ಐಆರ್ ದಾಖಲಿಸುವ ಮೊದಲೇ ನಿರೀಕ್ಷಣಾ ಜಾಮೀನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಅದು ಹೇಳಿದೆ.
2018 ರಲ್ಲಿ ರಾಧಿಕಾ ಅಗರ್ವಾಲ್ ಎಂಬುವವರು ಈ ಸಂಬಂಧ ಪ್ರಮುಖ ಅರ್ಜಿಯನ್ನು ಸಲ್ಲಿಸಿದ್ದರು.