ಇಂದಿನ ಅತ್ಯಾಧುನಿಕ ಯುಗದಲ್ಲಿ ಕೈಯಲ್ಲಿ ಮೊಬೈಲ್ ಇದ್ದರೆ ಸಾಕು. ಜಗತ್ತೆ ಕಿರುಬೆರಳಲ್ಲಿದೆ ಎಂಬ ಭಾವನೆ ಎಲ್ಲರಲ್ಲೂ ಇದೆ. ಅದರಂತೆ ಈ ಮೊಬೈಲ್ ಮೂಲಕ ದಿನನಿತ್ಯದ ಅರ್ಧದಷ್ಟು ತಾಂತ್ರಿಕ ಕೆಲಸಗಳು ಕ್ಷಣಾರ್ಥದಲ್ಲಿ ಮುಗಿಯುತ್ತದೆ. ಇದೀಗ ನಿಮಗೆ ಏನಾದರೂ, ಯಾರಿಂದದಾದರು ತೊಂದರೆಯಾದರೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿಬೇಕೆಂಬುದಿಲ್ಲ.
ನಿಮ್ಮ ಮೊಬೈಲ್ನಲ್ಲಿ ವಾಟ್ಸಾಪ್ ಆಯಪ್ ಇದ್ರೆ ಸಾಕು ಕಂಪ್ಲೇಂಟ್ ಕೊಡಬಹುದು. ಹೇಗೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.
ಹೌದು, ಈಗ ವಾಟ್ಸಾಪ್ ಮೂಲಕವೂ ಪೊಲೀಸರಿಗೆ ದೂರುಗಳನ್ನು ಕಳುಹಿಸಬಹುದು. ವಾಸ್ತವವಾಗಿ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ. ಕಳೆದ ಶನಿವಾರ(ಫೆ.22), ಮೊದಲ ಬಾರಿಗೆ ವಾಟ್ಸಾಪ್‌ನಲ್ಲಿ ಬಂದ ದೂರಿನ ಆಧಾರದ ಮೇಲೆ ಪೊಲೀಸರು ಇ-ಎಫ್‌ಐಆರ್ ದಾಖಲಿಸಿದ್ದಾರೆ. ವಾಟ್ಸಾಪ್‌ನಲ್ಲಿ ಬಂದ ದೂರಿನ ಮೇರೆಗೆ ಹಂದ್ವಾರದ ವಿಲ್ಗಮ್ ಪೊಲೀಸ್ ಠಾಣೆಯಲ್ಲಿ ಮೊದಲ ಇ-ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ, ಆರೋಪಿಗಳ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 115(2) ಮತ್ತು 126(2) ರ ಅಡಿಯಲ್ಲಿ ವಿಲ್ಗಾಮ್ ಪೊಲೀಸ್ ಠಾಣೆಯಲ್ಲಿ ಇ-ಎಫ್‌ಐಆರ್ ದಾಖಲಿಸಲಾಗಿದೆ.
ಮೊದಲ ಇ-ಎಫ್‌ಐಆರ್ ಪ್ರಕರಣ
ಜಮ್ಮು ಮತ್ತು ಕಾಶ್ಮೀರ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕ ಇಮ್ತಿಯಾಜ್ ಅಹ್ಮದ್ ದಾರ್ ಅವರು ವಾಟ್ಸಾಪ್ ಮೂಲಕ ಪೊಲೀಸರಿಗೆ ದೂರು ಕಳುಹಿಸಿದ್ದಾರೆ. ಅವರ ದೂರಿನ ಪ್ರಕಾರ, ಅವರು ಟ್ರಾಥ್‌ಪೋರಾದಿಂದ ಶ್ರೀನಗರಕ್ಕೆ ಹೋಗುತ್ತಿದ್ದಾಗ, ಆಶಿಕ್ ಹುಸೇನ್ ಭಟ್ ಮತ್ತು ಗೌಹರ್ ಅಹ್ಮದ್ ಭಟ್ ಎಂಬ ಇಬ್ಬರು ವ್ಯಕ್ತಿಗಳು ಅವರನ್ನು ವಿಲ್ಗಾಮ್‌ನಲ್ಲಿ ತಡೆದು ಹಲ್ಲೆ ನಡೆಸಿದರು.
ವಾಟ್ಸಾಪ್ ಮೂಲಕ ದೂರು ಹೇಗೆ ನೀಡೋದು..?
ಇನ್ನು ಈ E-FIR ದೂರು ನೀಡಲು ಜಮ್ಮು& ಕಾಶ್ಮೀರ ಪೊಲೀಸ್ ಇಲಾಖೆ ಡಿಜಿಟಲ್ ವ್ಯವಸ್ಥೆಯನ್ನು ದೇಶಲದಲ್ಲಿಯೇ ಮೊದಲು ಜಾರಿ ಮಾಡಿದೆ. ವಾಟ್ಸಾಪ್ ಚಾಟ್ ಮೂಲಕವೇ ನಿಮ್ಮ ಸಮಸ್ಯೆನ್ನು ಬರೆದು ಹತ್ತಿರದ ಠಾಣೆಗೆ ಕಳಿಸಬಹುದು. ಇದರಿಂದ ಮೊದಲು ಎಫ್‌ಐಆರ್ ದಾಖಲಾಗುತ್ತದೆ. ಬಳಿಕ ಪೊಲೀಸರು ತನಿಖೆ ಆರಂಭಿಸುತ್ತಾರೆ. ಇನ್ನು ಇ-ಎಫ್‌ಐಆರ್ ವ್ಯವಸ್ಥೆಯನ್ನು ಪರಿಚಯಿಸುವುದು ನ್ಯಾಯ ವ್ಯವಸ್ಥೆಯನ್ನು ಡಿಜಿಟಲ್ ಮತ್ತು ಸುಲಭವಾಗಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಈ ವ್ಯವಸ್ಥೆಯನ್ನು ಸರಿಯಾಗಿ ಜಾರಿಗೆ ತಂದರೆ, ದೇಶಾದ್ಯಂತ ಪೊಲೀಸ್ ವ್ಯವಸ್ಥೆಯ ಭವಿಷ್ಯವನ್ನೇ ಬದಲಾಯಿಸಬಹುದು ಎಂದು ಹೇಳಲಾಗುತ್ತಿದೆ.