ಚೆನ್ನೈ: ತಮಿಳುನಾಡಿನಲ್ಲಿ ಆಡಳಿತ ಪಕ್ಷ ಡಿಎಂಕೆ ಮತ್ತು ಬಿಜೆಪಿ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಉದಯನಿಧಿ ಸ್ಟಾಲಿನ್ ಅವರ 'ಗೆಟ್ ಔಟ್ ಮೋದಿ' ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗುರಿಯಾಗಿಸಿ ಸಾಮಾಜಿಕ ಮಾಧ್ಯಮಗಳಲ್ಲಿ 'ಗೆಟ್‌ಔಟ್‌ಸ್ಟಾಲಿನ್' ಎಂದು ಪೋಸ್ಟ್ ಮಾಡಿ ಅಭಿಯಾನ ಆರಂಭಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ವಿರುದ್ಧ ಫೆ.19ರಂದು ಚೆನ್ನೈನಲ್ಲಿ ನಡೆದ ರ್‍ಯಾಲಿಯ ವೇಳೆ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಮಾತನಾಡಿ, 'ರಾಜ್ಯದ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಸಿಯಲು ಯತ್ನಿಸಿದರೆ, ಜನರು 'ಗೆಟ್‌ಔಟ್‌ಮೋದಿ' ಅಭಿಯಾನವನ್ನು ಮಾಡುತ್ತಾರೆ. ಕಳೆದ ಬಾರಿ ತಮಿಳಿಗರ ಹಕ್ಕುಗಳನ್ನು ಕಸಿಯಲು ಯತ್ನಿಸಿದ್ದಕ್ಕೆ ಜನರು 'ಗೋ ಬ್ಯಾಕ್ ಮೋದಿ' ಅಭಿಯಾನ ಮಾಡಿದ್ದರು. ಮತ್ತೆ ಅದನ್ನೇ ಮಾಡಲು ಯತ್ನಿಸಿದರೆ ಈ ಬಾರಿ 'ಗೆಟ್‌ಔಟ್‌ಮೋದಿ' ಅಭಿಯಾನ ಮಾಡುತ್ತಾರೆ' ಎಂದು ಉಧಯನಿಧಿ ಹೇಳಿದ್ದರು.
ಇದಕ್ಕೆ ಅಣ್ಣಾಮಲೈ ಪ್ರತಿಯುತ್ತರ ನೀಡಿದ್ದು, ಹ್ಯಾಷ್‌ಟ್ಯಾಗ್ ಮೂಲಕ 'ಗೆಟ್‌ಔಟ್‌ಸ್ಟಾಲಿನ್' ಎಂದು ಪೋಸ್ಟ್ ಮಾಡಿ ಅಭಿಯಾನ ಆರಂಭಿಸಿದ್ದಾರೆ. 'ಕಳಂಕಿತ ಸಚಿವ ಸಂಪುಟ, ಭ್ರಷ್ಟಾಚಾರದ ಕೇಂದ್ರಬಿಂದು, ಮಾದಕ ದ್ರವ್ಯ ಮತ್ತು ಅಕ್ರಮ ಮದ್ಯದ ಸ್ವರ್ಗ, ಹೆಚ್ಚುತ್ತಿರುವ ಸಾಲ, ಶಿಥಿಲಗೊಂಡ ಶಿಕ್ಷಣ ಇಲಾಖೆ, ಮಹಿಳೆಯರು ಮತ್ತು ಮಕ್ಕಳಿಗೆ ಅನಿಶ್ಚಿತ ವಾತಾವರಣ, ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜಕ ನೀತಿ, ಚುನಾಯಿತ ನೀತಿಗಳು ಮತ್ತು ಭರವಸೆಗಳನ್ನು ಈಡೇರಿಸುವಲ್ಲಿ ನಿರಂತರ ವೈಫಲ್ಯಗಳನ್ನು ಕಂಡಿರುವ ಈ ಡಿಎಂಕೆ ನೇತೃತ್ವದ ಸರ್ಕಾರವನ್ನು ತಮಿಳುನಾಡಿನಲ್ಲಿ ಶೀಘ್ರವೇ ಜನರು ಕಿತ್ತೊಗೆಯಲಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
ಉಧಯನಿಧಿ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯದಿದ್ದರೆ ಶುಕ್ರವಾರ 'ಗೆಟ್‌ಔಟ್‌ಸ್ಟಾಲಿನ್' ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದು ಅಭಿಯಾನ ಆರಂಭಿಸುವುದಾಗಿ ಗುರುವಾರ ಹೇಳಿದ್ದರು. ಅದರಂತೆ ಶುಕ್ರವಾರ ಬೆಳಿಗ್ಗೆ ಅಣ್ಣಾಮಲೈ ಪೋಸ್ಟ್ ಹಂಚಿಕೊಂಡಿದ್ದಾರೆ.