ನವದೆಹಲಿ: ಸರಕು ಮತ್ತು ಸೇವಾ ಕಾಯ್ದೆ ಹಾಗೂ ಸೀಮಾಸುಂಕ ಕಾಯ್ದೆಗೆ ನಿರೀಕ್ಷಣಾ ಜಾಮೀನು ಅನ್ವಯವಾಗುತ್ತದೆ, ಎಫ್‌ಐಆರ್ ದಾಖಲಾಗದೆ ಇದ್ದರೂ ವ್ಯಕ್ತಿಗಳು ಬಂಧನದಿಂದ ತಪ್ಪಿಸಿಕೊಳ್ಳಲು ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್, ಬೇಲಾ ಎಂ. ತ್ರಿವೇದಿ ಅವರು ಇರುವ ತ್ರಿಸದಸ್ಯ ಪೀಠವು ಕಳೆದ ವರ್ಷದ ಮಾರ್ಚ್ 16ರಂದು ಕಾಯ್ದಿರಿಸಿದ್ದ ತೀರ್ಪನ್ನು ಗುರುವಾರ ಪ್ರಕಟಿಸಿದೆ.
ಸೀಮಾಸುಂಕ ಕಾಯ್ದೆ ಮತ್ತು ಜಿಎಸ್‌ಟಿ ಕಾಯ್ದೆಯಲ್ಲಿನ ಕೆಲವು ಅಂಶಗಳು ಅಪರಾಧ ದಂಡಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಹಾಗೂ ಸಂವಿಧಾನದಲ್ಲಿನ ಅಂಶಗಳಿಗೆ ಪೂರಕವಾಗಿ ಇಲ್ಲ ಎಂದು ರಾಧಿಕಾ ಅಗರ್ವಾಲ್ ಎನ್ನುವವರು 2018ಲ್ಲಿ ಅರ್ಜಿ ಸಲ್ಲಿಸಿದ್ದರು.
ಸಿಆರ್‌ಪಿಸಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಲ್ಲಿ (ಬಿಎನ್‌ಎಸ್‌ಎಸ್) ನಿರೀಕ್ಷಣಾ ಜಾಮೀನಿನ ಕುರಿತಾಗಿ ಇರುವ ಅಂಶಗಳು ಸೀಮಾಸುಂಕ ಕಾಯ್ದೆ ಮತ್ತು ಜಿಎಸ್‌ಟಿ ಕಾಯ್ದೆಗೆ ಕೂಡ ಅನ್ವಯ ಆಗುತ್ತವೆ ಎಂದು ಸಿಜೆಐ ಅವರು ತೀರ್ಪು ಪ್ರಕಟಿಸುವಾಗ ಹೇಳಿದ್ದಾರೆ.
ಜಿಎಸ್‌ಟಿ ಮತ್ತು ಸೀಮಾಸುಂಕ ಕಾಯ್ದೆಗಳ ಅಡಿಯಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ವ್ಯಕ್ತಿಗಳು ಎಫ್‌ಐಆರ್ ದಾಖಲಾಗುವ ಮೊದಲೂ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ.