ವಿಶ್ವಸಂಸ್ಥೆ: 'ಇಸ್ರೇಲ್ -ಪ್ಯಾಲೆಸ್ಟೀನ್ ನಡುವಿನ ಬಿಕ್ಕಟ್ಟು ನಿವಾರಿಸಲು ಎರಡು ರಾಷ್ಟ್ರಗಳ ಸ್ಥಾಪನೆಯೇ ಪರಿಹಾರ. ಗಾಜಾದಲ್ಲಿ ಜನಾಂಗೀಯ ಶುದ್ಧೀಕರಣದ ಯಾವುದೇ ರೀತಿಯ ಪ್ರಯತ್ನಗಳು ಸಲ್ಲದು' ಎಂದು ವಿಶ್ವಸಂಸ್ಥೆ ಬುಧವಾರ ಪ್ರತಿಪಾದಿಸಿದೆ.ಗಾಜಾಪಟ್ಟಿಯನ್ನು ಅಮೆರಿಕವು ತನ್ನ ಸುಪರ್ದಿಗೆ ಪಡೆಯಲಿದೆ ಎಂಬ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಅವರು ಈ ಮಾತು ಹೇಳಿದ್ದಾರೆ.
ಪರಿಹಾರ ಹುಡುಕುವ ಯತ್ನದಲ್ಲಿ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಬಾರದು. ಅಂತರರಾಷ್ಟ್ರೀಯ ಕಾಯ್ದೆಗೆ ಬದ್ಧರಾಗಿರುವುದು ಅಗತ್ಯ ಎಂದು ಹೇಳಿದರು.
ಪ್ಯಾಲೆಸ್ಟೀನ್ ಜನರ ಹಕ್ಕುಗಳ ರಕ್ಷಣೆ ಕುರಿತ ಸಮಿತಿಗೆ ಈ ಕುರಿತು ಸಲಹೆ ಮಾಡಿದ್ದು, 'ದೀರ್ಘಾವಧಿಯ ಶಾಂತಿ ಸ್ಥಾಪನೆ ಪ್ರಕ್ರಿಯೆ ಮೂರ್ತವಾಗಿರಬೇಕು. ಗಾಜಾಪಟ್ಟಿಯನ್ನು ಒಳಗೊಂಡಂತಹ ಸ್ವತಂತ್ರ ಪ್ಯಾಲೆಸ್ಟೀನ್ ರಾಷ್ಟ್ರ ನಿರ್ಮಾಣವೇ ಪರಿಹಾರ' ಎಂದರು.
'ಇಸ್ರೇಲ್‌ನ ಜೊತೆಗೆ ಶಾಂತಿ ಮತ್ತು ಭದ್ರತೆಯಿಂದ ಇರುವ ಸಾರ್ವಭೌಮ ಪ್ಯಾಲೆಸ್ಟೀನ್ ರಾಷ್ಟ್ರ ನಿರ್ಮಾಣವೇ ಮಧ್ಯಪೂರ್ವದ ಸ್ಥಿರತೆಗೆ ಸುಸ್ಥಿರವಾದ ಪರಿಹಾರ ಎಂದು ಹೇಳಿದರು.
ವಿಶ್ವಸಂಸ್ಥೆಯ ಸಭೆಯಲ್ಲಿ ಮಾತನಾಡಿದ ಪ್ಯಾಲೆಸ್ಟೀನ್‌ನ ಶಾಶ್ವತ ಸದಸ್ಯ ರಿಯಾದ್ ಮನ್ಸೂರ್ ಅವರು, 'ಗಾಜಾ ಪಟ್ಟಿಯ ಮರುನಿರ್ಮಾಣ ಅಗತ್ಯ. ಅದು, ಪ್ಯಾಲೆಸ್ಟೀನ್‌ನ ಬಹುಮುಖ್ಯ ವಲಯ. ಅದು ನಮ್ಮ ತಾಯ್ನಾಡಿನ ಭಾಗ' ಎಂದು ತಿಳಿಸಿದರು.
'ಗಾಜಾ ಸೇರಿದಂತೆ ಪ್ಯಾಲೆಸ್ಟೀನಿಯರನ್ನು ಅವರ ತಾಯ್ನಾಡಿನಿಂದ ಎತ್ತಂಗಡಿ ಮಾಡುವ ಯಾವುದೇ ಶಕ್ತಿ ಈ ಭೂಮಿಯ ಮೇಲೆ ಇಲ್ಲ' ಮನ್ಸೂರ್ ಹೇಳಿದರು.