ಜಮ್ಮು: ಭಾರತದಲ್ಲಿ ಮತದಾನಕ್ಕೆ ಉತ್ತೇಜನ ನೀಡಲು ಅಮೆರಿಕವು ಅಂದಾಜು ₹ 182 ಕೋಟಿ (21 ಮಿಲಿಯನ್ ಡಾಲರ್) ವ್ಯಯಿಸುತ್ತಿತ್ತು ಎಂಬ ವರದಿಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಸ್ಪಷ್ಟನೆ ನೀಡಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಒಮರ್, ದೇಶದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ವಿದೇಶಗಳು ತಲೆಹಾಕುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದಿದ್ದಾರೆ.
'ವಿದೇಶದ ಪಾಲ್ಗೊಳ್ಳುವಿಕೆಗೆ ಅವಕಾಶ ಇರಬಾರದು. ಆ ರೀತಿ ಆಗಿರುವುದಕ್ಕೆ ಈವರೆಗೆ ಯಾವುದೇ ಸಾಕ್ಷ್ಯ ಇಲ್ಲ. ನಮ್ಮ ಚುನಾವಣೆಗಳು ಮುಕ್ತ ಮತ್ತು ಪಾರದರ್ಶಕವಾಗಿ ನಡೆಯುತ್ತಿವೆ ಎಂದು ಈ ದಿನದವರೆಗೆ ನಾವು ನಂಬಿದ್ದೇವೆ. ಹಾಗಾಗಿ, ನಮ್ಮ ಚುನಾವಣೆಗಳಲ್ಲಿ ವಿದೇಶದ ಪಾತ್ರವಿದೆಯೇ ಎಂಬ ಬಗ್ಗೆ ಚುನಾವಣಾ ಆಯೋಗವೇ ಸ್ಪಷ್ಟನೆ ನೀಡಬೇಕು' ಎಂದು ಹೇಳಿದ್ದಾರೆ.
ಭಾರತದಲ್ಲಿ ಮತದಾನವನ್ನು ಪೆÇ್ರೀತ್ಸಾಹಿಸುವ ಸಲುವಾಗಿ ಅಮೆರಿಕ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ. ವೆಚ್ಚ ನಿಯಂತ್ರಣದ ಭಾಗವಾಗಿ ಈ ಕ್ರಮ ಕೈಗೊಂಡಿರುವುದಾಗಿ ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆಯ (ಡಿಒಜಿಇ) ಉಸ್ತುವಾರಿ ಎಲಾನ್ ಮಸ್ಕ್ ಅವರು ಕಳೆದ ವಾರ ಘೋಷಿಸಿದ್ದರು.
ಅದರ ಬೆನ್ನಲ್ಲೇ, ಭಾರತದಲ್ಲಿ ನಡೆಯುವ ಚುನಾವಣೆಗೆ ಹಣ ನೀಡುವ ಅಗತ್ಯವೇನಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದರು. ಹಾಗೆಯೇ, ಅಮೆರಿಕದ ಹಿಂದಿನ ಜೋ ಬೈಡನ್ ಆಡಳಿತವು ಭಾರತದಲ್ಲಿ ಬೇರೊಬ್ಬರು ಅಧಿಕಾರಕ್ಕೇರುವುದನ್ನು ಬಯಸಿತ್ತು ಎಂದೂ ಶಂಕಿಸಿದ್ದರು. ಈ ಕುರಿತು ಒಮರ್ ಪ್ರತಿಕ್ರಿಯಿಸಿದ್ದಾರೆ.