ಭುವನೇಶ್ವರ: ಪ್ರಕೃತಿ ಲಮ್ಸಾಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ನಿಲಯ ಖಾಲಿ ಮಾಡುವಂತೆ ನೇಪಾಳದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಆದೇಶಿಸಿದ ಬಳಿಕ ರಕ್ಸಾಲ್ ಗಡಿ ಮೂಲಕ 159 ವಿದ್ಯಾರ್ಥಿಗಳು ನೇಪಾಳಕ್ಕೆ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ(ಕೆಐಐಟಿ) ಖಾಸಗಿ ವಿಶ್ವವಿದ್ಯಾಲಯದಲ್ಲಿ ಸುಮಾರು 1 ಸಾವಿರ ನೇಪಾಳಿ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ.
ಕೆಐಐಟಿಯಲ್ಲಿ ಮೂರನೇ ವರ್ಷದ ಬಿಟೆಕ್(ಕಂಪ್ಯೂಟರ್ ಸೈನ್ಸ್) ವ್ಯಾಸಂಗಮಾಡುತ್ತಿದ್ದ ನೇಪಾಳದ ಪ್ರಕೃತಿ ಲಮ್ಸಾಲ್ ಭಾನುವಾರ(ಫೆ.16) ಮಧ್ಯಾಹ್ನ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿದ್ಯಾರ್ಥಿನಿ ಸಾವಿಗೆ ನ್ಯಾಯಕೊಡಿಸುವಂತೆ ಒತ್ತಾಯಿಸಿ ನೇಪಾಳದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಇದರಿಂದ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಕಠ್ಮಂಡು ರಿಪೋರ್ಟ್‌ರ್ಸ್ ಕ್ಲಬ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನೇಪಾಳಕ್ಕೆ ಹಿಂದಿರುಗಿದ ವಿದ್ಯಾರ್ಥಿಗಳ ತಂಡ, 'ಪ್ರಕೃತಿ ಲಮ್ಸಾಲ್ ಆತ್ಮಹತ್ಯೆಯ ನಂತರ ವಿಶ್ವವಿದ್ಯಾಲಯದಲ್ಲಿ ನಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ' ಎಂದು ಆರೋಪಿಸಿದ್ದಾರೆ.
'ವಿಶ್ವವಿದ್ಯಾನಿಲಯದ ಶಿಕ್ಷಕರು ಮತ್ತು ಇತರ ಸಿಬ್ಬಂದಿಮುಂದೆಯೇ ಭದ್ರತಾ ಸಿಬ್ಬಂದಿ ನಮಗೆ ಥಳಿಸಿದರು. ಅಲ್ಲದೇ ತಕ್ಷಣವೇ ಹಾಸ್ಟೆಲ್ ಖಾಲಿ ಮಾಡುವಂತೆ ಆದೇಶಿಸಿದ್ದರು'
'ಆಡಳಿತ ಮಂಡಳಿ ರಕ್ಷಣೆ ಕೊಡುವುದಾಗಿ ನಮಗೆ ಭರವಸೆ ನೀಡಿದ್ದರೂ ವ್ಯಾಸಂಗ ಮಾಡಲು ಸುರಕ್ಷಿತ ಮತ್ತು ಅನುಕೂಲಕರವಾದ ವಾತಾವರಣ ಅಲ್ಲಿಲ್ಲ' ಎಂದು ಹೇಳಿದ್ದಾರೆ.
ಏತನ್ಮಧ್ಯೆ, ವಿದ್ಯಾರ್ಥಿನಿ ಸಾವಿನಿಂದ ಉಂಟಾದ ಸಮಸ್ಯೆಯನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹರಿಸಲಾಗಿದೆ ಎಂದು ನೇಪಾಳದ ವಿದೇಶಾಂಗ ಸಚಿವ ಅರ್ಜು ರಾಣಾ ದೇವುಬಾ ಅವರು ಗುರುವಾರ ತಿಳಿಸಿದ್ದರು.