ಮಹಾಕುಂಭ ನಗರ: ಮಹಾಕುಂಭ ನಗರ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ ಅವಧಿಯನ್ನು ವಿಸ್ತರಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ರವೀಂದ್ರ ಮಂದರ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಮಹಾ ಕುಂಭಮೇಳಕ್ಕೆ ಭಾರಿ ಪ್ರಮಾಣದಲ್ಲಿ ಜನರು ಬರುತ್ತಿರುವುದರಿಂದ ಕುಂಭಮೇಳದ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹರಿದಾಡುತ್ತಿದೆ.
ಈ ಹಿನ್ನೆಲೆ ಅವಧಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಫೆಬ್ರುವರಿ 26ಕ್ಕೆ ಮಹಾಕುಂಭಮೇಳ ಮುಕ್ತಾಯಗೊಳ್ಳಲಿದೆ ಎಂದು ರವೀಂದ್ರ ಮಂದರ್ ಮಾಹಿತಿ ನೀಡಿದ್ದಾರೆ.
ಪೂರ್ವ ನಿಗದಿತ ವೇಳಾಪಟ್ಟಿಯ ಪ್ರಕಾರ ಕುಂಭಮೇಳ ಮುಕ್ತಾಯಗೊಳ್ಳಲಿದೆ. ರಾಜ್ಯ ಸರ್ಕಾರವು ಎಲ್ಲಾ ಭಕ್ತರಿಗೆ ಸುಗಮ ಸಂಚಾರ ಸೇರಿದಂತೆ ಇನ್ನಿತರೆ ವ್ಯವಸ್ಥೆಯನ್ನು ಮಾಡುತ್ತಿದೆ. ಕುಂಭಮೇಳ ಅವಧಿ ವಿಸ್ತರಿಸುವ ಯಾವುದೇ ಪ್ರಸ್ತಾವನೆಯೂ ಇಲ್ಲ. ಇಂತಹ ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಮಂದರ್ ತಿಳಿಸಿದ್ದಾರೆ.
ಮಾಹಿತಿಗಾಗಿ ಪ್ರಯಾಣಿಕರು ಹಾಗೂ ಭಕ್ತರು ಅಧಿಕೃತ ಮೂಲಗಳನ್ನೇ ಸಂಪರ್ಕಿಸಬೇಕೆಂದು ಮಂದರ್ ಹೇಳಿದ್ದಾರೆ.
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳವು ಜನವರಿ 13ರಿಂದ ಪ್ರಾರಂಭವಾಗಿದ್ದು ಫೆಬ್ರುವರಿ 26ರವರೆಗೆ ನಡೆಯಲಿದೆ.