ನವದೆಹಲಿ: ಎವರೆಸ್ಟ್ ಪರ್ವತದಲ್ಲಿನ ಹಿಮ ಹೊದಿಕೆಯು 150 ಮೀಟರ್‌ಗಳಷ್ಟು ಕುಸಿದಿದೆ. 2024-2025ರ ಚಳಿಗಾಲದ ವೇಳೆ ಪರ್ವತ ಪ್ರದೇಶದಲ್ಲಿ ಹಿಮದ ಶೇಖರಣೆ ಕಡಿಮೆಯಾಗಿತ್ತು ಎಂಬುದನ್ನು ಈ ವಿದ್ಯಮಾನ ತೋರಿಸುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.
ಅಮೆರಿಕದ ನಿಕೋಲ್ಸ್ ಕಾಲೇಜಿನ ಪರಿಸರ ವಿಜ್ಞಾನ ವಿಭಾಗದಲ್ಲಿ ಹಿಮನದಿಗಳ ತಜ್ಞರಾಗಿರುವ ಮೌರಿ ಪೆಲ್ಟೊ ಈ ಕುರಿತು ಸಂಶೋಧನೆ ಕೈಗೊಂಡಿದ್ದು, ವರದಿಯನ್ನು ಫೆ.2ರಂದು ತಮ್ಮ ಬ್ಲಾಗ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
2023ರ ಅಕ್ಟೋಬರ್‌ನಿಂದ ಈ ವರ್ಷದ ಜನವರಿ ವರೆಗೆ ನಾಸಾ ಕಳುಹಿಸಿರುವ ಚಿತ್ರಗಳನ್ನು ಪೆಲ್ಟೊ ಅವರು ವಿಶ್ಲೇಷಿಸಿದ್ದಾರೆ.
ಸಂಶೋಧನಾ ವರದಿಯ ಪ್ರಮುಖ ಅಂಶಗಳು
* 2024 ಹಾಗೂ 2025ರ ಜನವರಿಯಲ್ಲಿ 'ಸ್ನೋ ಲೈನ್'ನಲ್ಲಿ ಹಿಮದ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿತ್ತು. ಪರ್ವತದ ಕೆಳ ಭಾಗದಲ್ಲಿ ಹಿಮವು ಕರಗಿ ಕಾಯಂ ಆಗಿ ಶೇಖರಣೆಯಾಗುತ್ತದೆ. ಇದನ್ನು 'ಸ್ನೋ ಲೈನ್' ಎನ್ನಲಾಗುತ್ತದೆ. 'ಸ್ನೋ ಲೈನ್'ನಲ್ಲಿ ಹಿಮದ ಪ್ರಮಾಣ ಹೆಚ್ಚಾಗಿರುವುದು ತಾಪಮಾನದಲ್ಲಿ ಹೆಚ್ಚಳವಾಗಿರುವುದನ್ನು ತೋರಿಸುತ್ತದೆ.
* ಇದೇ ವರ್ಷದ ಜನವರಿ 28ರಂದು ಸ್ನೋ ಲೈನ್ 6100 ಮೀಟರ್‌ನಷ್ಟಿತ್ತು. ಇದು 2024ರ ಡಿಸೆಂಬರ್11ರಂದು ಇದ್ದ ಸ್ನೋ ಲೈನ್‌ಗಿಂತ 150 ಮೀಟರ್‌ನಷ್ಟು ಹೆಚ್ಚು ಇತ್ತು
* 2021 2023 2024 ರ ಚಳಿಗಾಲದಲ್ಲಿ ತಾಪಮಾನ ವಾಡಿಕೆಗಿಂತ ಹೆಚ್ಚು ಇತ್ತು ಹಾಗೂ ಶುಷ್ಕ ವಾತಾವರಣವಿತ್ತು. ಇದು ಪರ್ವತದ ಮೇಲಿನ ಹಿಮದ ಹೊದಿಕೆ ತಗ್ಗಲು ಹಾಗೂ ಸ್ನೋ ಲೈನ್ ಹೆಚ್ಚಾಗಲು ಹಾಗೂ ಕಾಳ್ಗಿಚ್ಚು ಅಧಿಕವಾಗಲು ಕಾರಣವಾಗಿತ್ತು * ಎವರೆಸ್ಟ್ ಪರ್ವತದ 6 ಸಾವಿರ ಮೀಟರ್ ಎತ್ತರದಲ್ಲಿ ಈ ಬಾರಿಯ ಚಳಿಗಾಲದಲ್ಲಿ ಹಿಮನದಿಗಳು ಕಂಡುಬಂದಿರಲಿಲ್ಲ. ಇದು ಕೂಡ ಹಿಮದ ಹೊದಿಕೆ ಕ್ಷೀಣಿಸಿದ್ದನ್ನು ತೋರಿಸುತ್ತದೆ
* ಇಷ್ಟೊಂದು ಎತ್ತರದ ಪ್ರದೇಶದಲ್ಲಿ ಚಳಿಗಾಲದ ವೇಳೆ ಹಿಮದ ಹೊದಿಕೆ ಕಡಿಮೆಯಾಗಿರುವುದಕ್ಕೆ ಉತ್ಪತನ ಪ್ರಕ್ರಿಯೆಯೇ ಕಾರಣವಾಗಿರುತ್ತದೆ. ಹಿಮವು ನೇರವಾಗಿ ಆವಿಯಾಗುವ ಪ್ರಕ್ರಿಯೆಯನ್ನು ಉತ್ಪತನ ಎನ್ನಲಾಗುತ್ತದೆ.
* ಉತ್ಪತನವು ಹಿಮನದಿಗಳು ಕ್ಷೀಣಿಸಲು ಕಾರಣವಾಗಿದೆ